ಸಕಲೇಶಪುರ: ‘ಬಾಳ್ಳುಪೇಟೆ–ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಕಾಡಾನೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುವುದರಿಂದ ಅವುಗಳ ಜೀವಕ್ಕೆ ಯಾವುದೇ ರೀತಿ ಹಾನಿ ಆಗದಂತೆ ರೈಲು ಚಾಲನೆ ಮಾಡಲು ಲೋಕೊ ಪೈಲೆಟ್‌ಗಳು ಹಾಗೂ ಇಲಾಖೆಯವರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಇಲ್ಲಿಯ ವಲಯ ಅರಣ್ಯ ಅಧಿಕಾರಿ ಎಚ್.ಆರ್.ಹೇಮಂತ್ ಕುಮಾರ್ ಹೇಳಿದರು.
ಪಟ್ಟಣದ ರೈಲ್ವೆ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ಅರಣ್ಯ ಇಲಾಖೆ ಹಾಗೂ ರೈಲ್ವೆ ಇಲಾಖೆಯಿಂದ ಕಾಡಾನೆ ಸುರಕ್ಷತೆ ಸಂಬಂಧ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.
‘5 ವರ್ಷಗಳ ಹಿಂದೆ ರೈಲ್ವೆ ಮಾರ್ಗದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾಡಾನೆಗಳು ದಾಡುತ್ತಿದ್ದಾಗ ಸಂಚರಿಸುತ್ತಿದ್ದ ರೈಲಿಗೆ ಸಿಕ್ಕಿ ಯಡಕುಮೇರಿ ಹಾಗೂ ಬಾಗೆ ಸಮೀಪದ ಕಾಕನಮನೆ ಬಳಿ ಒಟ್ಟು ಮೂರು ಕಾಡಾನೆಗಳು ಸತ್ತಿದ್ದವು. ಇತ್ತೀಚೆಗಂತೂ ಕಾಡಾನೆಗಳು ಈ ರೈಲ್ವೆ ಮಾರ್ಗದಲ್ಲಿಯೇ ಹೆಚ್ಚಾಗಿ ಅಡ್ಡಾಡುತ್ತಿವೆ. ಇವುಗಳು ರೈಲ್ವೆ ಅಪಘಾತಕ್ಕೆ ಒಳಗಾಗದಂತೆ ರೈಲ್ವೆ ಇಲಾಖೆ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದರು.
‘ಈ ಮಾರ್ಗದಲ್ಲಿ ರೈಲು ಸಂಚಾರದ ವೇಗವನ್ನು ಗಂಟೆಗೆ 30 ಕಿ.ಮೀ.ಗೆ ಮಿತಿ ಗೊಳಿಸುವುದು, ರೈಲ್ವೆ ಮಾರ್ಗದ ಎರಡೂ ಕಡೆ ಬೆಳೆದಿರುವ ಲಾಂಟಾನಗಳನ್ನು ತೆರವುಗೊಳಿಸುವುದು, ಕಾಡಾನೆಗಳ ಚಲನವಲನಗಳನ್ನು ತಿಳಿದುಕೊಳ್ಳಲು, ಲೋಕೋಪೈಲಟ್ ಹಾಗೂ ಸಹಾಯಕ ಲೋಕೋಪೈಲಟ್ ಗಳು ಅರಣ್ಯ ಇಲಾಖೆ ಹೊಸದಾಗಿ ಮಾಡಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಗಮನಿಸುವುದು. ಇಂತಹ ಇನ್ನೂ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡುವ ಮೂಲಕ ಆನೆಗಳಿಗೆ ಯಾವುದೇ ಅಪಘಾತ ಆಗದಂತೆ ಅರಣ್ಯ ಹಾಗೂ ರೈಲ್ವೆ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡಬೇಕಿದೆ’ ಎಂದರು.
ರೈಲ್ವೆ ಇಲಾಖೆಯ ಸೆಕ್ಷನ್ ಎಂಜಿನಿಯರ್ ಧರ್ಮೇಂದ್ರ ಕುಮಾರ್, ಪೌಲಿನ್, ಉಪವಲಯ ಅರಣ್ಯ ಅಧಿಕಾರಿಗಳಾದ ಮಹದೇವ್, ಮಂಜುನಾಥ್, ಅರ್ಜುನ್, ಮೋಹನ್ ಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರಾದ ಲೋಕೇಶ್, ದೇವರಾಜು, ಜಯಸ್ವಾಮಿ , ಲೋಕೊಪೈಲೆಟ್‌ಗಳು ಹಾಗೂ ಅಸಿಸ್ಟೆಂಟ್ ಲೋಕೊಪೈಲಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.