ಹೆತ್ತೂರು: ಮಲೆನಾಡಿನ ಭಾಗದಲ್ಲಿ ಮಳೆಗಾಲದಲ್ಲಿ ನಡೆಯುವ ಶಾಲಾ ಮತ್ತು ಕಾಲೇಜುಗಳ ಕ್ರೀಡಾಕೂಟಗಳು, ವಿದ್ಯಾರ್ಥಿಗಳ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಎಂಬ ನೋವು ಪೋಷಕರು ಹಾಗೂ ಕ್ರೀಡಾಪಟುಗಳಲ್ಲಿ ಆಳವಾಗಿ ಬೇರೂರುತ್ತಿದೆ.
ಬಹುತೇಕ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಯುತ್ತವೆ. ಈ ಭಾಗದಲ್ಲಿ ವಿಪರೀತ ಮಳೆ ಇರುವುದರಿಂದ ಅಥ್ಲೆಟಿಕ್ ಸೇರಿದಂತೆ ಯಾವುದೇ ಕ್ರೀಡೆಯಲ್ಲೂ ಪೂರ್ಣ ಪ್ರಮಾಣದ ಪ್ರದರ್ಶನ ಸಾಧ್ಯವಾಗುತ್ತಿಲ್ಲ.
ಜಿಲ್ಲಾ ಕೇಂದ್ರ ಹೊರತುಪಡಿಸಿ ಬಹುತೇಕ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿರುವ ಕ್ರೀಡಾಂಗಣಗಳು ಸುಸಜ್ಜಿತವಾಗಿಲ್ಲ. ಮಳೆಗಾಲದಲ್ಲಿ ಕ್ರೀಡಾಂಗಣಗಳು ಗದ್ದೆಯಾಗಿರುತ್ತವೆ. ಕ್ರೀಡಾಪಟುಗಳು ಓಡುವಾಗ ಜಾರಿ ಬೀಳುವ, ಕಬಡ್ಡಿ, ಕೊಕ್ಕೋ ಆಡುವಾಗ ಜಾರಿ ಬಿದ್ದು ಗಾಯಗಳಾಗುವ ಹಾಗೂವಾಲಿಬಾಲ್, ಥ್ರೋಬಾಲ್ ಆಟದ ನಡುವೆ ಚೆಂಡು ಕೈಯಿಂದ ಜಾರಿ ಹೋಗುವ ಸಾಧ್ಯತೆಗಳೇ ಹೆಚ್ಚು.
‘ಮಲೆನಾಡಿನಲ್ಲಿ ನವೆಂಬರ್ ತಿಂಗಳಲ್ಲಿ ಕ್ರೀಡಾಕೂಟ ಅಯೋಜಿಸಿದರೆ ಅನುಕೂಲ ಎಂಬುದು ಕ್ರೀಡಾಸಕ್ತರ ಅಭಿಪ್ರಾಯ. ಹೆಚ್ಚು ಮಳೆಯಾಗುವುದರಿಂದ ಸಕಲೇಶಪುರ ತಾಲೂಕಿನಲ್ಲಿ ಇದು ಸಮಸ್ಯೆ. ಉಳಿದ ತಾಲ್ಲೂಕಿನಲ್ಲಿ ಮಳೆಗಾಲದಲ್ಲೇ ಕ್ರೀಡಾಕೂಟಗಳು ತೊಂದರೆ ಇಲ್ಲದೆ ನಡೆಯುತ್ತವೆ’ ಎನ್ನುತ್ತಾರೆ ಜನರು.
‘ಮಳೆಗಾಲದಲ್ಲಿ ಕ್ರೀಡಾಕೂಟ ಆಯೋಜನೆ ಮಾಡುವುದು ಕಷ್ಟದ ಕೆಲಸವೇ. ವಿದ್ಯಾರ್ಥಿಗಳ ಕ್ರೀಡಾ ಪ್ರದರ್ಶನಕ್ಕೆ ಮಳೆ ಅಡ್ಡಿಯಾಗುತ್ತಿದೆ. ಆದರೆ, ನಿಯಮದಂತೆ ಕ್ರೀಡಾಕೂಟ ಆಯೋಜಿಸಲೇಬೇಕು. ಮಳೆಗಾಲದಲ್ಲಿ ಕ್ರೀಡಾಕೂಟದಿಂದ ಆಗುವ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಹರಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
‘ವಲಯ ಮಟ್ಟದ ಕ್ರೀಡಾಕೂಟಕ್ಕೆ ₹6ಸಾವಿರ, ತಾಲ್ಲೂಕು ಮಟ್ಟಕ್ಕೆ ₹20 ಸಾವಿರ, ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ₹10 ಸಾವಿರ ಅನುದಾನ ದೊರೆಯುತ್ತದೆ. ವಿಜೇತರಿಗೆ ಬಹುಮಾನ ವಿತರಣೆ, ಮಕ್ಕಳ ಊಟ, ಉಪಾಹಾರಕ್ಕೆ ಈ ಮೊತ್ತ ಸಾಲುವುದಿಲ್ಲ. ಸರ್ಕಾರ ನೀಡುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕಾಲಕಾಲಕ್ಕೆ ಅನುದಾನದ ಮೊತ್ತ ಪರಿಷ್ಕರಣೆ ಆಗಬೇಕು. ಇಲ್ಲವಾದಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರಿಗೆ ಕ್ರೀಡೆ ಆಯೋಜಿಸುವುದೇ ಕಷ್ಟವಾಗುತ್ತದೆ’ ಎಂದು ಆಯೋಜಕರೊಬ್ಬರು ತಿಳಿಸಿದರು.
ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತದೆ. ಹಾಗಾಗಿ ಈ ಭಾಗದಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟದಿಂದ ಆಗುವ ಸಮಸ್ಯೆ ಮತ್ತು ಅನುದಾನ ಹೆಚ್ಚಳದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು.ಸಿಮೆಂಟ್ ಮಂಜುನಾಥ ಶಾಸಕ
ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ನಡೆಸುವುದರಿಂದ ಮಕ್ಕಳಿಗೆ ಆಟವಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ಬಗ್ಗೆ ಯೋಚಿಸಿ ವೇಳಾಪಟ್ಟಿ ಬದಲಿಸಬೇಕು.ಸುಮಾ ಯಡಕೇರಿ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ
ಮಲೆನಾಡು ಭಾಗದಲ್ಲಿ ಕಬಡ್ಡಿ ವಾಲಿಬಾಲ್ ಫುಟ್‌ಬಾಲ್ ಕ್ರಿಕೆಟ್ ಷಟಲ್ ಬ್ಯಾಡ್ಮಿಂಟನ್ ಅಡುವ ಕ್ರೀಡಾಪಟುಗಳು ಆರು ತಿಂಗಳು ಅನಿವಾರ್ಯವಾಗಿ ತಮ್ಮ ಅಭ್ಯಾಸ ನಿಲ್ಲಿಸುವ ಪರಿಸ್ಥಿತಿ ಇದೆ.ರವಿಕುಮಾರ್ ಪೋಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.