ADVERTISEMENT

ದಾಖಲೆ ಪರಿಶೀಲಿಸಿ ಮಾತನಾಡುವುದು ಒಳಿತು: ಎಚ್‌.ಡಿ.ರೇವಣ್ಣ

ಕೇಂದ್ರ ಸಚಿವ ಕೃಷ್ಣಪಾಲ್‌ ಗುರ್ಜರ್ ಹೇಳಿಕೆಗೆ ರೇವಣ್ಣ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:22 IST
Last Updated 9 ಜುಲೈ 2022, 6:22 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಕೇಂದ್ರದ ಸಚಿವರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು, ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ದಾಖಲೆಗಳನ್ನು ನೋಡಿ ಮಾತನಾಡಲಿ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವರು ಹಾಸನದ ಪ್ರವಾಸದಲ್ಲಿದ್ದಾರೆ ದಯವಿಟ್ಟು ದಾಖಲೆಗಳನ್ನು ತೆಗೆದು ನೋಡಬೇಕು. ಹಾಸನದ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದು ದೇವೇಗೌಡರು. ಈ ಬಗ್ಗೆ ಮಾಹಿತಿ ಪಡೆಯಲಿ ಎಂದರು.

₹ 2,700 ಕೋಟಿ ವೆಚ್ಚದ ಬೆಂಗಳೂರು–ಹಾಸನ ನಡುವಿನ 200 ಕಿ.ಮೀ. ಚತುಷ್ಪಥ ಹೆದ್ದಾರಿ ಕಾಮಗಾರಿಗೆ 2007ರಲ್ಲಿ ಅಂದಿನ ಸಾರಿಗೆ ಸಚಿವ ರಾಜಾ ಮಂಜೂರಾತಿ ನೀಡಿದ್ದರು. ಹಾಸನ– ಬಿ.ಸಿ. ರೋಡ್‌ವರೆಗೆ ಚತುಷ್ಪಥ ಹೆದ್ದಾರಿಗೆ ಸಮೀಕ್ಷೆ ನಡೆಸಲು ಅಂದಿನ ಸಚಿವ ರಾಜಾ ಅವರೇ ಆದೇಶ ನೀಡಿದ್ದರು. ನಂತರ ಬಂದ ಆಸ್ಕರ್‌ ಫರ್ನಾಂಡಿಸ್ ಅವರು ಈ ಯೋಜನೆಗೆ ಮಂಜೂರಾತಿ ನೀಡಿದ್ದರು ಎಂದು ತಿಳಿಸಿದರು.

ADVERTISEMENT

ಆದರೆ, ಕೇಂದ್ರ ಸಚಿವರು ಹೆದ್ದಾರಿ ಕಾಮಗಾರಿ ಬಿಜೆಪಿ ಸರ್ಕಾರದ ಯೋಜನೆ ಎಂದು ಹೇಳಿದ್ದಾರೆ. 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನ–ಸಕಲೇಶಪುರ ಹೆದ್ದಾರಿಯಲ್ಲಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದನ್ನು ಸಚಿವರು ಗಮನಿಸಲಿ ಎಂದು ತಿರುಗೇಟು ನೀಡಿದರು.

ಹಾಸನಕ್ಕೆ ಮಂಜೂರಾಗಿದ್ದ ₹250 ಕೋಟಿ ಮೊತ್ತದ ತೋಟಗಾರಿಕೆ ಕಾಲೇಜನ್ನು ತಡೆದವರು ಯಾರು? ಹಾಸನದಲ್ಲಿ 1 ಸಾವಿರ ಎಕರೆ ಜಮೀನು ಮೀಸಲಿದ್ದರೂ ಐಐಟಿ ಸ್ಥಾಪನೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಳೆ ಹಾನಿಗೆ ಪರಿಹಾರ ಒದಗಿಸಿ: ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೋಟ್ಯಂತರ ಬೆಳೆ, ರಸ್ತೆಗಳು ಹಾಳಾಗಿವೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲಾಡಳಿತ ಮಾತ್ರ ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ನಿರತವಾಗಿದೆ ಎಂದು ದೂರಿದರು.

ಹಾಸನದಲ್ಲೇ ವಾಸ್ತವ್ಯ ಮಾಡಿರುವ ಕೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆದು, ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಪ್ರಧಾನಿಗಳ ಗಮನಕ್ಕೆ ತರಬಹುದಿತ್ತು. ಆದರೆ ಹಾಸನ ಜಿಲ್ಲೆಯ ಮಳೆ ಹಾನೆ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ದೂರಿದರು.

‘ಜೆಡಿಎಸ್‌ ಮುಗಿಸಲು ಸಾಧ್ಯವಿಲ್ಲ’
ದೇವಿಲಾಲ್ ಕುಟುಂಬಕ್ಕೆ ದೇವೇಗೌಡರ ಕುಟುಂಬವನ್ನು ಹೋಲಿಸಿ ಕೇಂದ್ರ ಸಚಿವರು ಭವಿಷ್ಯ ನುಡಿದಿದ್ದಾರೆ. 2023ರ ಚುನಾವಣೆ ಎಲ್ಲದಕ್ಕೂ ಉತ್ತರ ನೀಡಲಿದೆ. ಬಿಜೆಪಿಗೆ ಏನಾಗುತ್ತದೆ? ದೇವೇಗೌಡರ ಕುಟುಂಬ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಎಚ್‌.ಡಿ. ರೇವಣ್ಣ ಹೇಳಿದರು.

‘ಜೆಡಿಎಸ್‌ ಅನ್ನು ಕಾಂಗ್ರೆಸ್‌ನವರೋ, ಬಿಜೆಪಿಯವರೋ ಮುಗಿಸಲು ಸಾಧ್ಯವಿಲ್ಲ. ಇಂತಹ ಹತ್ತು ಸಚಿವರು ಹಾಸನಕ್ಕೆ ಬರಲಿ. ದೇವರು ಹಾಗೂ ಜನರ ಆಶೀರ್ವಾದ ಇರುವವರೆಗೂ ನಮ್ಮ ಕುಟುಂಬಕ್ಕೆ ಯಾರೂ ಏನನ್ನೂ ಮಾಡಲಾಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.