ADVERTISEMENT

ಅರಸೀಕೆರೆ: ಬೀದಿಬದಿ ವ್ಯಾಪಾರಿಗಳಿಗೆ ಸುಂಕ ನಿಗದಿಪಡಿಸಿ

ಸೂಚನಾ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 4:55 IST
Last Updated 1 ಏಪ್ರಿಲ್ 2022, 4:55 IST
ಅರಸೀಕೆರೆ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಮೀವುಲ್ಲಾ ಮಾತನಾಡಿದರು. ಕೆ.ಎಂ. ಶಿವಲಿಂಗೇಗೌಡ, ಗಿರೀಶ್, ಕಾಂತೇಶ್, ಬಸವರಾಜ್ ಕಾಕಪ್ಪ ಶಿಗ್ಗಾವಿ ಇದ್ದರು
ಅರಸೀಕೆರೆ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಮೀವುಲ್ಲಾ ಮಾತನಾಡಿದರು. ಕೆ.ಎಂ. ಶಿವಲಿಂಗೇಗೌಡ, ಗಿರೀಶ್, ಕಾಂತೇಶ್, ಬಸವರಾಜ್ ಕಾಕಪ್ಪ ಶಿಗ್ಗಾವಿ ಇದ್ದರು   

ಅರಸೀಕೆರೆ: ‘ನಗರದ ಬಿ.ಎಚ್.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ನಗರಸಭೆಯಿಂದ ನಿರ್ದಿಷ್ಟ ಸುಂಕ ನಿಗದಿಪಡಿಸಿ, ಸೂಚನಾ ಫಲಕ ಅಳವಡಿಸಬೇಕು’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ, ‘ನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಕೆಲ ಮಧ್ಯವರ್ತಿಗಳು ಅನಧಿಕೃತವಾಗಿ ಪ್ರತಿದಿನ ₹20ರಿಂದ ₹30 ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಪೌರಾಯುಕ್ತರಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ನಗರಸಭೆ ಸದಸ್ಯೆ ಶುಭಾ ಮನೋಜ್ ದೂರಿದರು.

ಸದಸ್ಯ ವೆಂಕಟಮುನಿ ಮಾತನಾಡಿ, ‘ನಗರದಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೂ ಮುನ್ನ ನಗರಸಭೆ ಸಾಮಾನ್ಯ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು. ಇತ್ತೀಚೆಗೆ ಖಾಸಗಿ ಬಡಾವಣೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ₹1.50 ಕೋಟಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಖಾಸಗಿ ಬಡಾವಣೆಗಳ ಅಭಿವೃದ್ಧಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಶೇ 90ರಷ್ಟು ಹಾಗೂ ನಗರಸಭೆಯ ಶೇ 10ರಷ್ಟು ಪಾಲಿರುತ್ತದೆ. ಖಾಸಗಿ ಬಡಾವಣೆಯೊಂದರ ₹1.50 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಐವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು’ ಎಂದರು.

ನಗರಸಭೆ ಸದಸ್ಯ ಸಮೀವುಲ್ಲಾ ಮಾತನಾಡಿ, ‘ಖಾತೆ ಬದಲಾವಣೆ ಮತ್ತು ಇ-ಸ್ವತ್ತು ಪಡೆಯಲು ಜನರು ಮಧ್ಯವರ್ತಿಗಳು, ನಗರಸಭೆ ನೌಕರರಿಗೆ ಲಂಚ ಕೊಡಬೇಕಿದೆ’ ಎಂದರು.

ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ‘ಇ–ಸ್ವತ್ತಿಗೆ ಅರ್ಜಿ ಸಲ್ಲಿಸಿದ 3–4 ದಿನಗಳೊಳಗೆ ₹75 ಶುಲ್ಕ ಪಡೆದು ನೀಡಬೇಕು’ ಎಂದು ಸೂಚಿಸಿದರು.

ಸದಸ್ಯ ಈಶ್ವರ್ ಮಾತನಾಡಿ, ‘ನಗರದ ಕೆಲ ವಾರ್ಡ್‌ಗಳಲ್ಲಿ ಬೀದಿ ದೀಪಗಳು, ಯುಜಿಡಿ, ರಸ್ತೆ ಸೌಲಭ್ಯ ಕಲ್ಪಿಸಿಲ್ಲ’ ಎಂದು ದೂರಿದರು.

ನಗರದಲ್ಲಿ ನಡೆದಿರುವ ಖಾಸಗಿ ಬಡಾವಣೆಗಳ ಅವ್ಯವಹಾರದ ತನಿಖೆಗೆ ಸ್ಥಾಯಿ ಸಮಿತಿ ರಚಿಸಬೇಕು ಎಂದು ಜೆಡಿಎಸ್ ಸದಸ್ಯರು ಪಟ್ಟುಹಿಡಿದರು. ಇದಕ್ಕೆ ಅಧ್ಯಕ್ಷ ಗಿರೀಶ್ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಗಿರೀಶ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ನಗರಸಭೆ ಪೌರಾಯುಕ್ತ ಬಸವರಾಜ್ ಕಾಕಪ್ಪ ಶಿಗ್ಗಾವಿ, ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಕಾಂತೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.