ADVERTISEMENT

₹5 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ: ಶಾಸಕ ಸಿ.ಎನ್‌. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 1:49 IST
Last Updated 20 ಆಗಸ್ಟ್ 2025, 1:49 IST
ಚನ್ನರಾಯಪಟ್ಟಣದಲ್ಲಿ ಸೋಮವಾರ ಪುರಸಭೆಯ ಸಾಮಾನ್ಯಸಭೆಯಲ್ಲಿ ಸದಸ್ಯರಾದ ಎಚ್.ಎನ್.ನವೀನ್, ಸಿ.ಎಸ್. ಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು
ಚನ್ನರಾಯಪಟ್ಟಣದಲ್ಲಿ ಸೋಮವಾರ ಪುರಸಭೆಯ ಸಾಮಾನ್ಯಸಭೆಯಲ್ಲಿ ಸದಸ್ಯರಾದ ಎಚ್.ಎನ್.ನವೀನ್, ಸಿ.ಎಸ್. ಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು   

ಚನ್ನರಾಯಪಟ್ಟಣ: ‘ಪಟ್ಟಣದಲ್ಲಿ ಕೊಳಚೆ ನೀರು ಕೆರೆಗೆ ಸೇರುವುದನ್ನು ತಪ್ಪಿಸುವ ದೃಷ್ಠಿಯಿಂದ ನೀರಾವರಿ ಇಲಾಖೆಯಿಂದ ಅಂದಾಜು ₹5 ಕೋಟಿ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುವುದು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಸಿ.ಎನ್. ಮೋಹನ್ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಇದರಿಂದ ಸ್ವಚ್ಛ ಪರಿಸರ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

‘ತಾಲ್ಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಸ್ಥಾಪಿಸಲು ಪುರಸಭೆಯಿಂದ ವೇದಿಕೆ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರ ಬಗ್ಗೆ ಊಹಾಪೋಹದ ಮಾತು ಬೇಡ. ಅದೇ ರೀತಿ ಹೌಸಿಂಗ್ ಬೋರ್ಡ್ ಮತ್ತು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಪುರಸಭೆ ವತಿಯಿಂದ ಶುದ್ಧ ಕುಡಿಯು ನೀರು ಘಟಕ ಆರಂಭಿಸಲಾಗುವುದು’ ಎಂದು ಹೇಳಿದರು.

ADVERTISEMENT

ಪೈಪ್‍ಲೈನ್ ಮೂಲಕ ಅಡುಗೆ ಅನಿಲ ವಿತರಣೆ ಕುರಿತು ಸದಸ್ಯ ಸಿ.ಎಸ್. ಪ್ರಕಾಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ‘ರಾಜ್ಯದ ಯಾವುದಾದರೂ ತಾಲ್ಲೂಕಿನಲ್ಲಿ ಈ ಯೋಜನೆ ಸಾಕಾರಗೊಂಡಿದ್ದರೆ ಸದಸ್ಯರು ಅಲ್ಲಿಗೆ ತೆರಳಿ ನೋಡಿಕೊಂಡು ಬಂದು ಅಗತ್ಯ ಇದ್ದರೆ ಅನುಮೋದನೆ ನೀಡಬಹುದು’ ಎಂದು ಉತ್ತರಿಸಿದರು.

ಸದಸ್ಯ ಎಚ್.ಎನ್. ನವೀನ್ ಮಾತನಾಡಿ, ‘ಪಟ್ಟಣದ ಪುರಸಭೆಗೆ ಸೇರಿದ ಮೂರು ಮಳಿಗೆಗಳಿಗೆ 3 ಬಾರಿ ಇ-ಹರಾಜು ಪ್ರಕ್ರಿಯೆ ನಡೆದಿದ್ದರೂ ಬಿಡ್‍ದಾರರು ಭಾಗವಹಿಸಿಲ್ಲ. ಹಾಗಾಗಿ ನಾಲ್ಕನೇ ಸಲ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಬಿಡ್‍ನಲ್ಲಿ ನಿಗದಿಯಾದ ಬಾಡಿಗೆ ಮೊತ್ತಕ್ಕೆ ಶೇ 25ರಷ್ಟು ಕಡಿಮೆ ಬಾಡಿಗೆ ನಿಗದಿಗೊಳಿಸಿ ಪುರಸಭಾ ಆಡಳಿತ ಮಂಡಳಿಯಲ್ಲಿ ಅನುಮೋದನೆ ಪಡೆದು ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ ನಂತರ ಹಂಚಿಕೆ ಮಾಡಬೇಕು ಎಂದು ನಿಯಮ ಇದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿರುವ ಪುರಸಭೆಯ ಅಧಿಕಾರಿ ಏಕಾಏಕಿ ಹಂಚಿಕೆ ಮಾಡಿದ್ದಾರೆ.‘ಈ ವಿಚಾರದಲ್ಲಿ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಮೂರು ಮಳಿಗೆಗಳ ಹಂಚಿಕೆ ರದ್ದುಮಾಡಿ, ಹೊಸದಾಗಿ ಇ-ಹರಾಜು ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯ ಪ್ರಕಾಶ್ ಬೆಂಬಲ ಸೂಚಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ 980 ನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲು ₹17.14 ಲಕ್ಷವನ್ನು ಪುರಸಭೆಯಿಂದ ಖರ್ಚು ಮಾಡಿದ್ದು, ಅಗತ್ಯಕ್ಕಿಂತ ಹೆಚ್ಚು ಖರ್ಚಾಗಿದೆ. ಸಾರ್ವಜನಿಕರ ಹಣವನ್ನು ಪೋಲು ಮಾಡಬಾರದು ಎಂಬ ಎಚ್ಚರಿಕೆ ಅಧಿಕಾರಿಗಳಲ್ಲಿರಬೇಕು’ ಎಂದು ಸದಸ್ಯ ನವೀನ್ ಹೇಳಿದರು.

ಉಪಾಧ್ಯಕ್ಷೆ ಕವಿತಾ, ಸ್ಥಾಯಿಸಮಿತಿ ಅಧ್ಯಕ್ಷ ಎ.ಎಸ್. ಗಣೇಶ್, ಮುಖ್ಯಾಧಿಕಾರಿ ಆರ್. ಯತೀಶ್ ಕುಮಾರ್
ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.