
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಚಿತ್ರನಟ ಶಂಕರ್ ನಾಗ್ ಆಟೊ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಶಂಕರ್ ನಾಗ್ ಜನ್ಮದಿನ ಮತ್ತು ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಭಾನುವಾರ ಬೆಳಿಗ್ಗೆ ಸಂಘದ ಆವರಣದಲ್ಲಿ ಕನ್ನಡ ಬಾವುಟದ ಧ್ವಜಾರೋಹಣವನ್ನು ಶಾಸಕ ಸಿ.ಎನ್. ಬಾಲಕೃಷ್ಣ ನೆರವೇರಿಸಿದರು.
‘ನಾಡು ಕಂಡ ಶ್ರೇಷ್ಠನಟ, ನಿರ್ದೇಶಕ ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು. ಚಿಕ್ಕವಯಸ್ಸಿನಲ್ಲಿ ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡಿದ್ದರು. ರಾಜ್ಯದಲ್ಲಿ 100 ರಂಗ ಮಂದಿರ ನಿರ್ಮಿಸುವ ಗುರಿಹೊಂದಿದ್ದರು. ಶಂಕರ್ ನಾಗ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಧಾರಾವಾಹಿ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯವಾಯಿತು’ ಅವರು ಎಂದರು.
ಡಾ.ದಿವ್ಯಾ, ಜೆಡಿಎಸ್ ಮುಖಂಡ ಜೈದೀಪ್, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಜಿ. ಜಗದೀಶ್, ಮುಖಂಡ ಕುಮಾರ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.
ವಿನಾಯಕ, ಅಂಬೇಡ್ಕರ್ ಆಟೊ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘ, ಭಗತ್ ಸಿಂಗ್,ಸಂಗೊಳ್ಳಿ ರಾಯಣ್ಣ,ಕುವೆಂಪು ಮಹಾತ್ಮಗಾಂಧಿ, ಕಾವೇರಿ ಆಟೊ ಚಾಲಕರ ಸಂಘ ಸೇರಿ 9 ಆಟೋ ಚಾಲಕರ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಎಲ್ಲ ಆಟೊರಿಕ್ಷಾಗಳಿಗೆ ಕನ್ನಡ ಬಾವುಟ, ತಾಯಿ ಭುವನೇಶ್ವರಿ ಮತ್ತು ಶಂಕರ್ ನಾಗ್ ಭಾವಚಿತ್ರ ಆಳವಡಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕನ್ನಡದ ಹಾಡುಗಳಿಗೆ ಚಾಲಕರು ಹೆಜ್ಜೆಹಾಕಿದರು.
ಸಂಘದ ಅಧ್ಯಕ್ಷ ಯೋಗೀಶ್, ಕಾರ್ಯದರ್ಶಿ ರಂಗಸ್ವಾಮಿ, ಉಪಾಧ್ಯಕ್ಷ ನಾಗೇಂದ್ರ, ಖಜಾಂಚಿ ಹರೀಶ್ ಸೇರಿ ನಿರ್ದೇಶಕರು ಭಾಗವಹಿಸಿದ್ದರು. ಆಟೊ ಚಾಲಕರ ಸಂಘದ ಗೌರವಾಧ್ಯಕ್ಷ ಪುರಿಮಂಜು, ಜಾವಿದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.