ADVERTISEMENT

ಪ್ರಯತ್ನದಿಂದ ಯಶಸ್ಸು ಸಾಧಿಸಿ: ಶಿವಾಚಾರ್ಯ ಸ್ವಾಮೀಜಿ

ಜನಪ್ರಿಯ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:47 IST
Last Updated 18 ಫೆಬ್ರುವರಿ 2026, 6:47 IST
ಹಾಸನದ ಜನಪ್ರಿಯ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಹಾಸನದ ಜನಪ್ರಿಯ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.   

ಹಾಸನ: ಜ್ಞಾನ ಎನ್ನುವುದು ಕೇವಲ ಉದ್ಯೋಗ ಪಡೆಯುವುದಕ್ಕೆ ಮಾತ್ರವಲ್ಲ, ಅದು ಉತ್ತಮ ಸಮಾಜ ನಿರ್ಮಾಣ ಮಾಡುವ ಸಾಧನ ಆಗಬೇಕು. ಬದುಕಿನಲ್ಲಿ ಏರಿಳಿತಗಳು ಸಹಜ. ಆದರೆ ಪ್ರಯತ್ನವೇ ಯಶಸ್ಸಿನ ಮೂಲ ಎಂಬ ಮಾತನ್ನು ನೆನಪಿಟ್ಟುಕೊಂಡು ಧೈರ್ಯದಿಂದ ಮುನ್ನಡೆಯೋಣ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜನಪ್ರಿಯ ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಮತ್ತು ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಲ್ಯಾಂಪ್ ಲೈಟಿಂಗ್, ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ. ನಾವು ಪಡೆದ ಈ ಪದವಿ ಕೇವಲ ಒಂದು ಕಾಗದವಲ್ಲ. ಅದು ನಮ್ಮ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಸಂಕೇತ. ಇಂದು ನಾವು ಶಿಕ್ಷಣ ಸಂಸ್ಥೆಯ ಆವರಣದಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಸೇರುತ್ತಿದ್ದೇವೆ ಎಂದರು.

ADVERTISEMENT

ಜನಪ್ರಿಯ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ, ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟು, ಹಲವಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿರುವುದು ಸಂತೋಷದ ವಿಷಯ. ಡಾ.ಅಬ್ದುಲ್ ಬಶೀರ್ ಸಾಮಾಜಿಕ ಕಳಕಳಿ ಉಳ್ಳವರು. ಅವರಿಗೆ ದೇವರು ಇನ್ನಷ್ಟು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಜನಪ್ರಿಯ ಫೌಂಡೇಶನ್ ನಿರ್ದೇಶಕರಾದ ಡಾ. ಶಾರುಖ್ ಅಬ್ದುಲ್ ಮಾತನಾಡಿ, ಜನಪ್ರಿಯ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವು ಜನಪ್ರಿಯರಾಗಿ ಹೊರಹೊಮ್ಮಬೇಕು. ಶಿಸ್ತು, ಸತತ ಪರಿಶ್ರಮದ ಮೂಲಕ ಗುರಿ ಸಾಧನೆಯತ್ತ ಮುನ್ನುಗ್ಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜನಪ್ರಿಯ ಸಂಸ್ಥೆಯ ಅಧ್ಯಕ್ಷ ಡಾ.ವಿ.ಕೆ ಅಬ್ದುಲ್ ಬಶೀರ್ ಮಾತನಾಡಿ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ಉತ್ತಮ ವೃತ್ತಿ ಆರಿಸಿಕೊಳ್ಳಲು ಶಿಕ್ಷಣವು ಅನಿವಾರ್ಯ. ಇದು ಅಜ್ಞಾನದ ಕತ್ತಲೆ ಹೋಗಲಾಡಿಸಿ, ಜ್ಞಾನದ ಬೆಳಕನ್ನು ಮೂಡಿಸುತ್ತದೆ. ಶಿಕ್ಷಣ ಪಡೆದ ವ್ಯಕ್ತಿಯು ತನ್ನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ. ಆ ಮೂಲಕ ಸಮಾಜದ ಸುಧಾರಣೆಗೆ ಕೊಡುಗೆ ನೀಡುತ್ತಾನೆ. ಬಡತನ ನಿರ್ಮೂಲನೆ ಮತ್ತು ದೇಶದ ಅಭಿವೃದ್ಧಿಗೆ ಶಿಕ್ಷಣವೇ ದಾರಿದೀಪ, ನಮ್ಮ ಸಂಸ್ಥೆಯು ಆರೋಗ್ಯ ಮತ್ತು ಶಿಕ್ಷಣದ ಕಡೆ ಹೆಚ್ಚು ಗಮನ ನೀಡುತ್ತಿದ್ದು, ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ದೇಶಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.

ಪ್ರಾಂಶುಪಾಲ ಡಾ. ಪ್ರವೀಣ್‍ಕುಮಾರ್‌ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜನಪ್ರಿಯ ಫೌಂಡೇಶನ್ ಉಪಾಧ್ಯಕ್ಷೆ ಫಾತಿಮಾ ನಸ್ರೀನ್ ಬಶೀರ್, ಪುಷ್ಪಗಿರಿ ಕಾಲೇಜಿನ ಪ್ರಾಂಶುಪಾಲ ಡಾ. ಶಫಾ, ಜನಪ್ರಿಯ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವ್ಯಾಸಂಗ ಮುಗಿಸಿದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.