
ಅರಸೀಕೆರೆ: ದ್ವೇಷ ಮಾಡಿಕೊಂಡು, ಇಲ್ಲದ ಸುಳ್ಳು ಹೇಳೋ ರಾಜಕಾರಣಿಗಳನ್ನು ಕಟ್ಟಿಕೊಂಡು ಹೋಗಬೇಡಿ. ನನ್ನದು ಸಹಜ ರಾಜಕಾರಣ. ಸುಳ್ಳು ಹೇಳುವುದಿಲ್ಲ. ಆದರೆ ಆಗುತ್ತದೆ ಎನ್ನುತ್ತೇನೆ. ಆಗದಿದ್ದನ್ನು ಮಾಡೋಕ್ಕೆ ಆಗಲ್ಲ ಎನ್ನುತ್ತೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕಿನ ಬಾಣಾವಾರ ಹೋಬಳಿಯ ಬೆಂಡೆಕೆರೆ ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿದ ನಂತರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಶಾಸಕನಾಗುವ ಮೊದಲು ಚನ್ನರಾಯಪಟ್ಟಣ, ಹೊಳೆನರಸೀಪುರ ಕ್ಷೇತ್ರ ಮಾತ್ರ ಅಭಿವೃದ್ದಿ ಆಗುತ್ತಿದ್ದವು. ಅರಸೀಕೆರೆ ಕ್ಷೇತ್ರಕ್ಕೆ ಯಾವುದೇ ಸೌಲಭ್ಯ ಇರಲಿಲ್ಲ. ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದ ಮೇಲೆ ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಕುಡಿಯುವ ನೀರಿನ ವ್ಯವಸ್ಥೆ, ಹಳ್ಳಿ ಹಳ್ಳಿಗೂ ರಸ್ತೆಗಳ ನಿರ್ಮಾಣ ಸೇರಿದಂತೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ಹೇಳಿದರು.
70 ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅರಸೀಕೆರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಜವಾಬ್ದಾರಿ ನನ್ನದಾಗಿದೆ. 6 ತಿಂಗಳಲ್ಲಿ ಬೆಂಡೆಕೆರೆ ಕೆರೆಗೆ ನೀರು ಹರಿಸಿಯೇ ತೀರುತ್ತನೆ. 10 ದಿನಗಳೊಳಗೆ ಇಲ್ಲಿನ ಕೆರೆಗೆ ನೀರು ಹರಿಸಲು ಪೈಪ್‌ಲೈನ್ ಅಳವಡಿಕೆಗೆ ಭೂಮಿಪೂಜೆ ನೆರವೇರಿಸಲಾಗುವುದು. ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಹರಿಸಿ ಸಂಪೂರ್ಣ ಕೃಷಿಗೆ ಸಹಕರಿಸುವುದೇ ನನ್ನ ಧ್ಯೇಯ ಎಂದರು.
ಬೆಂಡೆಕೆರೆ ಗ್ರಾಮಕ್ಕೆ ಅಗತ್ಯವಿರುವ ಸೇತುವೆ, ಸಮುದಾಯ ಭವನ, ಕಾಂಕ್ರೀಟ್ ರಸ್ತೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕೇಳಿದ ತಕ್ಷಣವೇ ಒದಗಿಸಲಾಗಿದೆ ಎಂದು ಹೇಳಿದರು.
ಕಂದಾಯ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿದ್ದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಲಾಯಿತು. ಸಭೆಯಲ್ಲಿ ಸಾರ್ವಜನಿಕರಿಂದ ಅನೇಕ ಅರ್ಜಿಗಳನ್ನು ಸ್ವೀಕರಿಸಲಾಯಿತು. ಅವುಗಳಲ್ಲಿ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.
ತಹಶೀಲ್ದಾರ್ ಸಂತೋಷ್ ಕುಮಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಗಂಗಣ್ಣ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.