ADVERTISEMENT

ಸಚಿವ ಸ್ಥಾನ ಖಚಿತ: ಶಿವಲಿಂಗೇಗೌಡ

ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:00 IST
Last Updated 26 ಡಿಸೆಂಬರ್ 2025, 3:00 IST
ಅರಸೀಕೆರೆಯ ಮಾಲೇಕಲ್ಲು ತಿರುಪತಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರು, ಪ್ರತಿಭಾವಂತ ವಿದ್ಯಾರ್ಥಿಗಳು, ಪ್ರಗತಿ ಪರ ರೈತರು, ಕುರಿಗಾಹಿಗಳನ್ನು ಸನ್ಮಾನಿಸಲಾಯಿತು.
ಅರಸೀಕೆರೆಯ ಮಾಲೇಕಲ್ಲು ತಿರುಪತಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರು, ಪ್ರತಿಭಾವಂತ ವಿದ್ಯಾರ್ಥಿಗಳು, ಪ್ರಗತಿ ಪರ ರೈತರು, ಕುರಿಗಾಹಿಗಳನ್ನು ಸನ್ಮಾನಿಸಲಾಯಿತು.   

ಅರಸೀಕೆರೆ: ಮಂತ್ರಿಯಾಗುವ ಸುಸಂದರ್ಭವನ್ನು ನಿಲ್ಲಿಸಕ್ಕೆ ಆಗುವುದಿಲ್ಲ. ಅನಿವಾರ್ಯ ಕಾರಣಗಳಿಂದ ನಿಧಾನವಾಗಿರಬಹುದು. ಹತ್ತಾರು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದಂತೆ ಮಂತ್ರಿ ಸ್ಥಾನ ಒಲಿದೇ ಒಲಿಯುತ್ತದೆ ಎಂದು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಹೊರವಲಯದ ಮಾಲೇಕಲ್ಲು ತಿರುಪತಿಯಲ್ಲಿ ಗುರುವಾರ ನಡೆದ ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘದ 17 ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಪ್ರಗತಿಪರ ರೈತರು, ಉತ್ತಮ ಕುರಿಗಾಹಿ ಹಾಗೂ ನಿವೃತ್ತ ನೌಕಕರ ಸನ್ಮಾನ ಸಮಾರಂಭವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅರಸೀಕೆರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಒತ್ತು ನೀಡುವ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದೆ. ಅರಸೀಕೆರೆ ಕ್ಷೇತ್ರದ ನೀರಾವರಿ ಯೋಜನೆ ಈಡೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಅವರ ಸಹಕಾರದಿಂದಲೇ ಕ್ಷೇತ್ರದ ಅಭಿವೃದ್ದಿ ಸಾಧ್ಯವಾಗಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಹಾಸನ, ಅರಸೀಕೆರೆ ಹಾಗೂ ಬಾಣಾವಾರ ಸೇರಿದಂತೆ ಹತ್ತಾರು ಬಾರಿ ಭೇಟಿ ನೀಡಿದಾಗ, ಶಿವಲಿಂಗೇಗೌಡರನ್ನು ಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಕೆಲವು ವಿದ್ಯಮಾನಗಳಿಂದ ನಿಧಾನವಾಗಿದೆ ಎಂದರು.

ಆಧುನಿಕರಣದಲ್ಲಿ ಸಮಾಜದ ಏಳಿಗೆಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದ ಹಿತದೃಷ್ಟಿಯಿಂದ ಸಂಘಟಿತರಾಗಬೇಕು. ಸಮಾಜದಲ್ಲಿನ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು. ಸ್ವಾರ್ಥ ಸಾಧನೆಗೆ ಸಮಾಜದ ಸ್ವಾಸ್ಥ್ಯ ಹಾಳ ಮಾಡಬಾರದು. ಕನಕ ನೌಕರರ ಸಂಘವು ಉತ್ತಮವಾಗಿದ್ದು, ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದೀರಿ. ನ್ನ ಸತತ ಗೆಲುವಿಗೆ ನಿಮ್ಮ ಸಮಾಜದ ಕೊಡುಗೆ ಸ್ಮರಣೀಯ. ನಿಮ್ಮ ಶ್ರೇಯೋಭಿವೃದ್ದಿಗೆ ಶ್ರಮಿಸುವೆ ಎಂದರು.

ಕ್ಷೇತ್ರದ ಪವಿತ್ರ ಸ್ಥಳ ಗಂಗಾಧರೇಶ್ವರನ ಗಂಗೆ ಮಡುವಿನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ಇದರ ಜೀರ್ಣೋದ್ದಾರದ ಕುರಿತು ಸ್ವಾಮೀಜಿ ಬಳಿ ಮಾತನಾಡುವೆ. ನಗರದ ಬಸ್‌ ನಿಲ್ದಾಣದ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣದ ಕೆಲಸ ನಡೆಯುತ್ತಿದೆ. ಸಮಾಜಮುಖಿ ಕೆಲಸಕ್ಕೆ ಯಾವಾಗಲೂ ಮುಂದೆ ಇರುತ್ತೇನೆ ಎಂದು ಹೇಳಿದರು.

ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್‌.ಬಸವರಾಜು, ಗೌರವಾಧ್ಯಕ್ಷ ಭೂದೇವಸ್ವಾಮಿ ಒಡೆಯರ್‌, ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಮೈಸೂರಿನ ಶಾಲಾ ಶಿಕ್ಷಣ ಇಲಾಖೆ ಸಹ ನಿರ್ದೇಶಕ ಕೆ.ಎಸ್‌.ಪ್ರಕಾಶ್‌, ಜಿಲ್ಲಾ ಉಪ ನಿರ್ದೇಶಕ ರಂಗನಾಥಸ್ವಾಮಿ, ಶಿಕ್ಷಣ ಅಧಿಕಾರಿ ಎಚ್.ಎಸ್. ಚಂದ್ರಶೇಖರ್‌, ತಾಲ್ಲೂಕು ಆರೋಗ್ಯಾಧಿಕಾರಿ ರಂಗನಾಥ್‌, ಕ್ಷೇತ್ರಶಿಕ್ಷಣಾಧಿಕಾರಿ ಮೋಹನ್‌ಕುಮಾರ್‌, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯಕಾರಿ ಮಂಡಳಿಯ ಕಾರ್ಯಾಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ನಿಜಗುಣ, ಕಾರ್ಯದರ್ಶಿ ರವಿಕುಮಾರ್‌, ಖಜಾಂಚಿ ಗೋವಿಂದಸ್ವಾಮಿ, ಸಹ ಕಾರ್ಯದರ್ಶಿ ಲೋಕೇಶ್‌, ನಿರ್ದೇಶಕರು, ಹಿರಿಯ ನೌಕರರು ಹಾಗೂ ಸಮಾಜದವರು ಇದ್ದರು.

ಸಮಾಜದ ಅಭಿವೃದ್ದಿಗಾಗಿ ಇಂತಹ ಕಾರ್ಯಕ್ರಮ ನಡೆಯುತ್ತಿರಬೇಕು. ಸಮಾಜದಲ್ಲಿ ನಾವು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ.
ಪಟೇಲ್‌ ಶಿವಪ್ಪ ಹಾಸನ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.