
ಶ್ರವಣಬೆಳಗೊಳ: ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಸೈಬರ್ ವಂಚನೆ ಇದೀಗ ಹಳ್ಳಿಗಳಿಗೂ ಕಾಲಿಟ್ಟಿದ್ದು, ಸರಕಾರಿ ಯೋಜನೆಗಳ ನೆಪದಲ್ಲಿ ಮುಗ್ಧರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ.
ಇಂತಹದ್ದೇ ಒಂದು ಪ್ರಕರಣ ಹೋಬಳಿ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ನಾಗಣ್ಣ ಎಂಬುವವರ ಮಗಳು ಪಲ್ಲವಿಗೆ ಸರ್ಕಾರಿ ಯೋಜನೆಯೊಂದರ ನೆಪದಲ್ಲಿ ₹12 ಸಾವಿರ ವಂಚನೆ ಮಾಡಲಾಗಿದೆ.
ಶನಿವಾರ ಪಲ್ಲವಿ ಅವರಿಗೆ ಅಪರಿಚಿತ ಸಂಖ್ಯೆಯೊಂದರಿಂದ ಕರೆ ಬಂದಿದ್ದು, ನಾವು ಸರ್ಕಾರದ ಇಲಾಖೆಯೊಂದರಿಂದ ಮಾತನಾಡುತ್ತಿದ್ದೇವೆ ಎಂದು ಆರೋಪಿಗಳು ಪರಿಚಯಿಸಿಕೊಂಡಿದ್ದಾರೆ. ಅಂಗನವಾಡಿಯಿಂದ ಬರುವ ಸೌಲಭ್ಯಗಳಿಂದ ಇಂದು ನಿಮ್ಮ ಖಾತೆಗೆ ಸರ್ಕಾರ ₹12 ಸಾವಿರ ಜಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಅನಂತರ ಈ ಹಣವನ್ನು ಪಡೆಯಲು ತಾವು ನಾವು ಕಳಿಸುವ ಸಂದೇಶದ ಮೇಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಹೇಳಿದ್ದಾರೆ. ಸರ್ಕಾರಿ ಯೋಜನೆಯ ಹಣ ಬರುತ್ತದೆ ಎಂಬ ಆಸೆಗೆ ಬಿದ್ದ ಪಲ್ಲವಿ, ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಅವರ ಖಾತೆಯಿಂದ 12 ಸಾವಿರ ರೂಪಾಯಿ ಕಟ್ ಆಗಿದೆ.
ಪಲ್ಲವಿ ಅವರು ಇದೀಗ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಅಪರಿಚಿತ ಕರೆಗಳಿಂದ ಮೋಸ ಹೋಗಿ ಹಣ ಕಳೆದುಕೊಳ್ಳಬೇಡಿ, ನಿಮ್ಮ ಮುಗ್ಧತೆಯನ್ನೇ ಕಳ್ಳರು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಪಿಎಸ್ಐ ನವೀನ್ ಹಾಗೂ ಸುಬ್ರಹ್ಮಣ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.