
ಶ್ರವಣಬೆಳಗೊಳ(ಹಾಸನ): ವರ್ಷಾಯೋಗ ಚಾತುರ್ಮಾಸ್ಯ ವ್ರತ ಆಚರಿಸಲು ಆಚಾರ್ಯ ವರ್ಧಮಾನ ಸಾಗರ ಮಹಾರಾಜರರು, ಸಂಘಸ್ಥ ತ್ಯಾಗಿಗಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ್ದ ಮುನಿಶ್ರೀ 108 ಸುಪ್ರಭಾ ಸಾಗರ ಮಹಾರಾಜರು (80) ಮೃತ್ಯು ಮಹೋತ್ಸವದ ಯಮ ಸಲ್ಲೇಖನ ವ್ರತ ಸ್ವೀಕರಿಸಿ ಶನಿವಾರ ಸಮಾಧಿ ಮರಣ ಹೊಂದಿದರು.
ಸೆ.4ರಂದು ಆಚಾರ್ಯ ವರ್ಧಮಾನ ಸಾಗರ ಮಹಾರಾಜರಿಂದ ಅವರು ಸಲ್ಲೇಖನ ವ್ರತ ಸ್ವೀಕರಿಸಿದ್ದರು. ದಿಗಂಬರ ಜೈನ ಮುನಿ ಪರಂಪರೆಯಂತೆ ಆಹಾರ, ಜಲ, ಷಡ್ರಸಗಳನ್ನು ತ್ಯಾಗ ಮಾಡುತ್ತ ಬಂದಿದ್ದರು. ಅ. 17ರ ನಂತರ ಸಂಪೂರ್ಣ ಜಲ ಮತ್ತು ಆಹಾರ ತ್ಯಜಿಸಿ, ಯಮ ಸಲ್ಲೇಖನ ವ್ರತವನ್ನು ಸ್ವೀಕರಿಸಿ ಸಮಾಧಿ ಮರಣ ಹೊಂದಿದರು.
ಮಧ್ಯಪ್ರದೇಶದ ಸಾಗರ ಜಿಲ್ಲೆಯ ನಿಮೋನಾದ ಭಂಡಾ ಇವರ ಜನ್ಮ ಸ್ಥಳ. ಬಿಎ, ಎಲ್ಎಲ್‌ಬಿ ಪದವಿ ಪಡೆದಿದ್ದ ಅವರು, ನಿರ್ಣಯ ಸಾಗರ ಮಹಾರಾಜರಿಂದ 2021 ರಲ್ಲಿ ಬಾಂಬೋಡಿಯಾ ಧರ್ಮಗಿರಿ ಅತಿಶಯ ಕ್ಷೇತ್ರದಲ್ಲಿ ಬ್ರಹ್ಮಚರ್ಯ ಮುನಿ ದೀಕ್ಷೆ ಪಡೆದಿದ್ದರು. ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಹಾಗೂ ಆಚಾರ್ಯರ ತ್ಯಾಗಿಗಳ ಸಮ್ಮುಖದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿತು.
ಕಾರ್ಯಕ್ರಮಕ್ಕೂ ಮೊದಲು ಮಂಗಲವಾದ್ಯ ಭಕ್ತರ ಮಹಾಮಂತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.