ADVERTISEMENT

ಶ್ರವಣಬೆಳಗೊಳ: ಪಾರಂಪರಿಕ ತಾಣದ ಪುನರುಜ್ಜೀವನಕ್ಕೆ ‘ಪ್ರಸಾದ’ ಯೋಜನೆ

ಕೇಂದ್ರದ ಯೋಜನೆಗೆ ಶ್ರವಣಬೆಳಗೊಳ ಕ್ಷೇತ್ರ ಸೇರ್ಪಡೆ: ಹೆಚ್ಚುತ್ತಿರುವ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:55 IST
Last Updated 19 ನವೆಂಬರ್ 2025, 2:55 IST
ಈಚೆಗೆ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರೊಂದಿಗೆ ಚರ್ಚಿಸುತ್ತಿರುವ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ.
ಈಚೆಗೆ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರೊಂದಿಗೆ ಚರ್ಚಿಸುತ್ತಿರುವ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ.   

ಶ್ರವಣಬೆಳಗೊಳ: ಸಾಂಸ್ಕೃತಿಕ ಪರಂಪರೆಯ ಧಾರ್ಮಿಕ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಪ್ರವಾಸಿ ತಾಣಗಳ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಆರಂಭಿಸಿರುವ ‘ಪ್ರಸಾದ’ ಯೋಜನೆಗೆ ಶ್ರವಣಬೆಳಗೊಳ ಕ್ಷೇತ್ರ ಸೇರ್ಪಡೆ ಮಾಡಲು ಒತ್ತಡ ಹೆಚ್ಚಾಗಿದೆ.

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಪ್ರಸಾದ ಯೋಜನೆಗೆ 2014 –15ರಲ್ಲಿ ಚಾಲನೆ ನೀಡಲಾಗಿದ್ದು, ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಣಕಾಸು ನೆರವು ಒದಗಿಸುವ ಯೋಜನೆಗೆ ಇದಾಗಿದೆ.

ತಪ, ತ್ಯಾಗ, ಸಂತರ ಭೂಮಿಯಾಗಿರುವ ಶ್ರವಣಬೆಳಗೊಳ, 2,300 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿದೆ. ಸಂಸ್ಕೃತಿ, ಶಿಲ್ಪಕಲೆ, ಸಾಹಿತ್ಯ, ಸಂರಕ್ಷಿತ ಸ್ಮಾರಕ, ಶಿಲಾ ಶಾಸನ, ಧರ್ಮ, ವಾಸ್ತುಶಿಲ್ಪ, ಕಲೆಯ ಬಸದಿಗಳು, ತೀರ್ಥಂಕರರು, ಯಕ್ಷ –ಯಕ್ಷಿಯರು, ಮಾನಸ್ತಂಭಗಳು, ಗುಹೆ ಜಾಲಂಧ್ರಗಳು. ಭಿತ್ತಿಚಿತ್ರಗಳು, ಹಸ್ತಪ್ರತಿಯ ತಾಡೋಲೆಗಳು, ಸಲ್ಲೇಖನ ಸಮಾಧಿ ಮರಣದ ನಿಷಧಿ ಮಂಟಪಗಳಿವೆ. ಕವಿ ರನ್ನ ಹಾಗೂ ಚಾವುಂಡರಾಯನ ಹಸ್ತಾಕ್ಷರ ಇರುವ ಶಿಲಾಶಾಸನ ಚಂದ್ರಗಿರಿ ಬೆಟ್ಟದಲ್ಲಿದೆ ಎಂದು ಕ್ಷೇತ್ರದ ಪೀಠಾಧಿಪತಿ ಅಭಿವನ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳುತ್ತಾರೆ.

ADVERTISEMENT

ದೇಶದಲ್ಲಿಯೇ ಅತಿಹೆಚ್ಚು 573 ಶಿಲಾಶಾಸನ ಹೊಂದಿರುವ ಕ್ಷೇತ್ರವಾಗಿದ್ದು, ಮೈಸೂರು ವಿವಿಯ ಎಪಿಗ್ರಾಫಿ ಆಫ್‌ ಕರ್ನಾಟಕದಲ್ಲಿ ಪ್ರಕಟಿಸಿದೆ. ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡುತ್ತಿದ್ದಾರೆ. ಗಿರಿಗಳ ಆಗರವಾಗಿರುವ ದಿಗಂಬರ ಜೈನ ಕ್ಷೇತ್ರ ಪ್ರಸಾದ ಯೋಜನೆಯಡಿ ಸೇರ್ಪಡೆಗೆ ಅಗತ್ಯವಿರುವ ಅರ್ಹತೆ ಹೊಂದಿದೆ.

ಪ್ರಾಚೀನ ಕಾಲದಿಂದಲೂ ಸಲ್ಲೇಖನ ಸಮಾಧಿ ಮರಣವನ್ನು ಆಹ್ವಾನಿಸಿ ಶ್ರೇಷ್ಠವೆಂದು ಸ್ವೀಕರಿಸಲಾಗಿರುವ ಈ ಕ್ಷೇತ್ರ, ಕಳ್ವಪ್ಪು, ಕಟವಪ್ರ ಎಂದು ಕರೆಯಲಾಗುತ್ತಿತ್ತು. ಈಗಲೂ ಮುಂದುವರಿದಿದ್ದು, ಈಚೆಗೆ ಮುನಿಶ್ರೀ ಸುಪ್ರಭಾ ಸಾಗರರ ಸಮಾಧಿ ಮರಣಕ್ಕೆ ಸಾಕ್ಷಿಯಾಗಿದೆ.

ಇಲ್ಲಿನ ಇತಿಹಾಸವು ಭಾರತದ ಪ್ರಪ್ರಥಮ ಚಕ್ರವರ್ತಿ ಮಗದ ದೊರೆ ಚಂದ್ರಗುಪ್ತ ಮೌರ್ಯ, ಅಂತಿಮ ಶ್ರುತ ಕೇವಲಿ ಭದ್ರಬಾಹು, ಅವರ ಜೊತೆಯಲ್ಲಿ 12 ಸಾವಿರ ಮುನಿಗಳು ಅಪಾರ ಸಂಪತ್ತಿನೊಂದಿಗೆ ಕ್ಷೇತ್ರಕ್ಕೆ ಬಂದು ಅಭಿವೃದ್ಧಿಗೆ ನಾಂದಿ ಹಾಡಿದರು. ಅದರ ಸಾಕ್ಷಿಯಾಗಿ ಚಂದ್ರಗುಪ್ತ ಬಸದಿಯ ಜಾಲಾಂಧ್ರವನ್ನು ಚಿತ್ರ ಸಮೇತ ಕಾಣಬಹುದು.

ಜೈನ ಮಠದ ಚಂದ್ರನಾಥ ಬಸದಿಯಲ್ಲಿ ಮೈಸೂರು ಒಡೆಯರ ಕಾಲದ ಭಿತ್ತಿ ಚಿತ್ರಗಳಲ್ಲಿ ಪಾರ್ಶ್ವನಾಥ ಮತ್ತು ನಾಗಕುಮಾರ ಚರಿತ್ರೆಗಳ ವಿವರ, ಇಲ್ಲಿ ಜರುಗುವ ಜಾತ್ರಾ ಮಹೋತ್ಸವ ಬಿಂಬಿಸುವ ಸುಂದರ ಭಿತ್ತಿ ಚಿತ್ರಗಳಿವೆ. ಈ ಅದ್ಬುತ ಚಿತ್ರ ಕಲೆಯನ್ನು ಶಿವರಾಂ ಕಾರಂತರೂ ಶ್ಲಾಘಿಸಿದ್ದಾರೆ.

ಬೃಹತ್ ಮಾನಸ್ತಂಭ
ಭದ್ರಬಾಹುಗಳ ಗುಹೆ
ಸುಂದರ ಜಾಲಾಂಧ್ರಗಳು.
ಚಾವುಂಡರಾಯ ಬಸದಿಯಲ್ಲಿ ಮುಗುಳ್ನಗೆಯ ಶಿಲಾಸುಂದರಿ ಮೂರ್ತಿ.
ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಕ್ಷೇತ್ರಕ್ಕೆ ಬಂದಿದ್ದ ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿಗಳಲ್ಲಿ ಚಂದ್ರಗುಪ್ತ ಮೌರ್ಯ ಪ್ರಾರ್ಥಿಸುತ್ತಿರುವ ಶಿಲ್ಪವನ್ನು ಶ್ರವಣಬೆಳಗೊಳದ ಚಂದ್ರಗಿರಿಯ ಮುಂಭಾಗದಲ್ಲಿ ಕಾಣಬಹುದು.
  • ಹೆಲಿಪ್ಯಾಡ್‌ಗೆ ಕಾಯಂ ಸ್ಥಳ; ಮಹಾಮಸ್ತಕಾಭಿಷೇಕಕ್ಕೆ ಸಾವಿರ ಎಕರೆ ಮೀಸಲು

  • ಸಾಂಸ್ಕೃತಿಕ, ವಸ್ತು ಪ್ರದರ್ಶನ, ಊಟೋಪಾಚಾರಕ್ಕೆ 500 ಎಕರೆ ಸ್ಥಳ

  • ಐತಿಹಾಸಿಕ 4 ಗಿರಿ, 4 ಸಾವಿರ ಹಸ್ತ ಪ್ರತಿ, 573 ಶಿಲಾಶಾಸನ ಲಭ್ಯ

ಮಠದಲ್ಲಿ ಸಾವಿರ ವರ್ಷದ ಹಿಂದೆ ಬಿಡಿಸಿರುವ ವರ್ಣ ಚಿತ್ರಗಳು ಅತ್ಯಂತ ಸುಂದರವಾಗಿದ್ದು ಅವುಗಳ ಕಲಾ ರಚನೆಯನ್ನು ಸಂರಕ್ಷಣೆ ಮಾಡಲು ಹಣಕಾಸಿನ ನೆರವನ್ನು ಒದಗಿಸಲು ಇಲಾಖೆಗೆ ಸೂಚಿಸಿದ್ದೇನೆ
ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ
ಸಿಂಧೂ ಲಿಪಿಯನ್ನು ಹೋಲುವ ಲಿಪಿಯನ್ನು ವಿಂಧ್ಯಗಿರಿಯ ಸಿದ್ಧರ ಗುಂಡಿನ ಎಡಭಾಗದಲ್ಲಿ ಚಿತ್ರಿಸಿದ್ದು ಪ್ರವೇಶ ದ್ವಾರದಲ್ಲಿ ಗಜಲಕ್ಷ್ಮಿಯ ಮೂರ್ತಿ ಅಖಂಡ ಬಾಗಿಲ ಬಳಿ ಇದ್ದು ಕೆತ್ತನೆ ಎಲ್ಲರ ಗಮನ ಸೆಳೆಯುತ್ತಿವೆ
ಪ್ರೊ.ಜೀವಂಧರ್ ಕುಮಾರ್ ಹೋತಪೇಟೆ ಇತಿಹಾಸಕಾರ
ಪ್ರಸಾದ ಯೋಜನೆಯಡಿ ಕ್ಷೇತ್ರ ಸೇರ್ಪಡೆ ಮಾಡಿದಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿ ಕ್ಷೇತ್ರವನ್ನು ವಿಶ್ವದಲ್ಲಿರುವ ಅತಿ ಸುಂದರ ಸುಸಜ್ಜಿತ ವ್ಯಾಟಿಕನ್ ನಗರದಂತೆ ರಾರಾಜಿಸುವಂತೆ ಮಾಡಬಹುದು
ಸಿ.ಎನ್.ಬಾಲಕೃಷ್ಣ, ಶಾಸಕ

ಅಪರೂಪದ ಶಿಲಾಶಾಸನ

ಕಲಾಕೃತಿಗಳ ಆಗರ ಗಂಗರ ಮಂತ್ರಿ ಚಾವುಂಡರಾಯನಿಂದ 981ರಲ್ಲಿ ಸ್ಥಾಪಿಸಿದ್ದ 57.8 ಅಡಿಯ ಏಕ ಶಿಲೆಯ ಅಖಂಡ ಬಾಹುಬಲಿಯ ಸುಂದರ ಮೂರ್ತಿಗೆ 12 ವರ್ಷಕ್ಕೊಮ್ಮೆ ಜರುಗುವ ಮಹಾಮಸ್ತಕಾಭಿಷೇಕ ಜಗದ್ವಿಖ್ಯಾತಿ ಪಡೆದಿದೆ. ಹೊಯ್ಸಳರ ಕಾಲದಲ್ಲಿ ಮೂರ್ತಿ ಶಿಲ್ಪ ಮತ್ತು ವಾಸ್ತುಶಿಲ್ಪದ ಬೆಳವಣಿಗೆಯನ್ನು ತಿಳಿಸುವ ಸ್ಮಾರಕಗಳು ಸುತ್ತಾಲಯಗಳು ಜಿನಾಲಯಗಳು ಕನ್ನಡ ಲಿಪಿ ಮತ್ತು ಭಾಷೆಯನ್ನು ಗುರುತಿಸುವ ಶಿಲಾಶಾಸನಗಳು ಜನೋಪಯೋಗಿ ಕೆರೆ ಕಟ್ಟೆಗಳನ್ನು ಶ್ರವಣಬೆಳಗೊಳ ಸುತ್ತ ಕಾಣಬಹುದಾಗಿದೆ. ಜಿನನಾಥಪುರದಲ್ಲಿ ಇರುವ ಕಲಾವೈಭವದಿಂದ ಕೂಡಿದ ಶಾಂತಿ ನಾಥ ಬಸದಿ ಭಂಡಾರ ಬಸದಿಯ ಪ್ರಾಂಗಣದಲ್ಲಿ ಸಾಗುತ್ತಿದ್ದಂತೆ ಇಂದ್ರನ ನೃತ್ಯವಿರುವ ಆಕರ್ಷಕ ಭಂಗಿ ಇದ್ದರೆ ಗರ್ಭ ಗುಡಿಯಲ್ಲಿ ಚವ್ವೀಸ ತೀರ್ಥಂಕರರು ಹರಿ ಪೀಠದಲ್ಲಿ ವಿರಾಜಮಾನರಾಗಿರುವ ಖಡ್ಗಾಸನದ ದೃಶ್ಯ ಕಂಗೊಳಿಸುತ್ತಿದೆ. ಚಂದ್ರಗಿರಿಯಲ್ಲಿ ಮಹಡಿ ಇರುವ ಚಾವುಂಡರಾಯ ಬಸದಿಯಲ್ಲಿ ಮೊನಾಲಿಸಾಳನ್ನು ಮೀರುವ ಮುಗುಳ್ನಗೆಯ ಶಿಲಾಸುಂದರಿ ಮೂರ್ತಿ ಇದೆ.

ಯೋಜನೆಯಿಂದ ಅಭಿವೃದ್ಧಿಗೆ ಬಲ

ಈ ಯೋಜನೆಯ ವ್ಯಾಪ್ತಿಗೆ ಶ್ರವಣಬೆಳಗೊಳ ಸೇರ್ಪಡೆಗೊಂಡರೆ ಸುಸಜ್ಜಿತ ಸುಂದರ ಪ್ರವಾಸಿ ತಾಣವಾಗಿ ಬೆಳೆದು ದೇಶ–ವಿದೇಶಗಳಿಂದ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಇಲ್ಲಿನ ಆಚಾರ ವಿಚಾರದಿಂದ ವಿಶ್ವಕ್ಕೆ ಶಾಂತಿ ಸಂದೇಶದ ನೀಡಲು ಹೆಚ್ಚಿನ ಬಲ ಬರುತ್ತದೆ. ಪಟ್ಟಣದ ಎಲ್ಲ ರಸ್ತೆಗಳ ವಿಸ್ತರಣೆ ಹೆದ್ದಾರಿಯಿಂದ ಸಂಪರ್ಕಿಸುವ ಜೋಡಿ ರಸ್ತೆಗಳ ನಿರ್ಮಾಣ ತ್ಯಾಜ್ಯ ವಿಲೇವಾರಿ ಘಟಕ ಕುಡಿಯುವ ನೀರು ಒಳ ಚರಂಡಿ ಮತ್ತು ಶುದ್ಧೀಕರಣ ಘಟಕ ಯಾತ್ರಿಕರ ವಸತಿಗೆ ವಿಶ್ರಾಂತಿ ಗೃಹಗಳು ಉದ್ಯಾನ ಉನ್ನತ ದರ್ಜೆಯ ಹೋಟೆಲ್ ಶುಚಿತ್ವ ಪುತ್ಥಳಿಗಳ ಸ್ಥಾಪನೆ ಆಸ್ಪತ್ರೆ ಸಾರಿಗೆ ವಿದ್ಯುತ್ ರೈಲು ಸಂಪರ್ಕದ ಸುಧಾರಣೆ ಪ್ರತ್ಯೇಕ ತರಕಾರಿ ಮತ್ತು ಮಾಂಸದ ಮಾರುಕಟ್ಟೆ ವಾಣಿಜ್ಯ ಸಂಕೀರ್ಣಗಳನ್ನು ಯೋಜನಾಬದ್ಧವಾಗಿ ಜಾರಿಗೆ ತಂದರೆ ಭವಿಷ್ಯದಲ್ಲಿ ಸುಂದರ ನಗರಗಳಂತೆ ಇದೂ ಕಂಗೊಳಿಸುತ್ತದೆ ಎಂದು ಇಲ್ಲಿನ ಜನತೆ ಹೇಳುತ್ತಾರೆ. ಶ್ರವಣಬೆಳಗೊಳವು ಗ್ರಾಮ ಪಂಚಾಯಿತಿಯಾಗಿದ್ದು ಮೇಲ್ದರ್ಜೆಗೆ ಏರಿಸಿ ಪುರಸಭೆ ಅಥವಾ ವಿಶೇಷವೆಂದು ಸರ್ಕಾರ ಪರಿಗಣಿಸಿದರೆ ಇವುಗಳನ್ನು ನಿರ್ವಹಿಸಲು ಕೆಎಎಸ್ ಅಧಿಕಾರಿಯ ಅವಶ್ಯಕತೆ ಇದೆ. ಇಲ್ಲಿಗೆ ಮೇಲಿಂದ ಮೇಲೆ ಗಣ್ಯಾತಿ ಗಣ್ಯರು ಬರುತ್ತಿದ್ದು ಶಾಶ್ವತ ಯೋಜನೆ ಕೈಗೊಳ್ಳಲು ಕೇಂದ್ರದ ಪ್ರಸಾದ ಯೋಜನೆ ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎನ್ನುವುದು ಇಲ್ಲಿನ ಜನ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.