
ಶ್ರವಣಬೆಳಗೊಳದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಒದೆಗಲ್ ಬಸದಿಯ ವೃಷಭನಾಥ ಸ್ವಾಮಿಗೆ ಅರಿಸಿನದ ಅಭಿಷೇಕ ನೆರವೇರಿಸಲಾಯಿತು
ಶ್ರವಣಬೆಳಗೊಳ: ವಿಶ್ವ ತೀರ್ಥ ವಿಂಧ್ಯಗಿರಿಯ ಬಾಹುಬಲಿಯ ದೊಡ್ಡಬೆಟ್ಟದ ತ್ರಿಕೂಟಾಚಲದ ಒದೆಗಲ್ ಬಸದಿಯಲ್ಲಿ ವಿರಾಜಮಾನರಾಗಿರುವ ಪ್ರಥಮ ತೀರ್ಥಂಕರರಾದ ಭಗವಾನ್ ವೃಷಭನಾಥ ಸ್ವಾಮಿಯ ಮೋಕ್ಷ ಕಲ್ಯಾಣದ ನಿಮಿತ್ತ ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಭಾನುವಾರ ನೆರವೇರಿದವು.
ಜಿನರಾತ್ರಿ ಪ್ರಯುಕ್ತ ವೃಷಭನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಗಳ ಕಲಶವನ್ನು ಪ್ರತಿಷ್ಠಾಪಿಸಲಾಯಿತು. ಣಮೋಕಾರ ಮತ್ತು ಮಂಗಲಾಷ್ಠಕಗಳೊಂದಿಗೆ ಮಂಗಲವಾದ್ಯಗಳು ಮೊಳಗುತ್ತಿದ್ದಂತೆ ಜಲ, ಎಳನೀರು, ಈಕ್ಷುರಸ, ಕ್ಷೀರ, ಕಷಾಯ, ಕಲ್ಕಚೂರ್ಣ, ಅರಿಸಿನ, ಅಷ್ಟಗಂಧ ಮತ್ತು ವಿವಿಧ ಬಗೆಯ ಹಣ್ಣುಗಳ ರಸದಿಂದ ವೈಭವದ ಅಭಿಷೇಕ ನೆರವೇರಿಸಲಾಯಿತು. ಪ್ರತಿಯೊಂದೂ ಅಭಿಷೇಕವಾದಾಗ ಪ್ರತ್ಯೇಕವಾಗಿ ಅರ್ಘ್ಯಗಳನ್ನು ಸಮರ್ಪಿಸಲಾಯಿತು. ಪುಷ್ಪವೃಷ್ಠಿ ಆದ ನಂತರ ಮಹಾಶಾಂತಿಧಾರದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಪಟ್ಟಣದ ಎಸ್.ಬಿ.ಬ್ರಹ್ಮಸೂರಯ್ಯ ಅಣ್ಣಯ್ಯ ಕುಟುಂಬದವರು ಮತ್ತು ಎಸ್.ಪಿ.ಪುನೀತ್ ಕುಟುಂಬದವರು ಪೂಜಾ ಸೇವಾಕರ್ತರಾಗಿದ್ದರು. ಪೂಜಾ ನೇತೃತ್ವವನ್ನು ಕೆ.ಪಿ.ರಾಜಣ್ಣ, ವಿಮಲ್, ಎಸ್.ಪಿ.ಪ್ರಶಾಂತ್, ವಿಹಾರ್, ನಿಖಿಲ್ ವಹಿಸಿದ್ದರು. ಆಗಮಿಸಿದ್ದ ಶ್ರಾವಕ ಶ್ರಾವಕಿಯರಿಗೆ ಶ್ರೀಫಲ ಗಂಧೋದಕ ವಿತರಿಸಲಾಯಿತು.
ಜಿನರಾತ್ರಿಯ ಪ್ರಯುಕ್ತ ವಿಂಧ್ಯಗಿರಿಯ ಪ್ರವೇಶ ದ್ವಾರ ಮತ್ತು ಒದೆಗಲ್ ಬಸದಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.