ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿದ್ದು, ಹೃದಯಾಘಾತ ಮರಣ ತಡೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಿಶೇಷ ಅಧ್ಯಯನ ಪ್ರಾರಂಭಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಯ ಮಿಷನ್ ಆರಂಭಿಸುವಂತೆ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದರು.
ನವದೆಹಲಿಯಲ್ಲಿರುವ ಸಂಸದರು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಕ್ಷೇತ್ರದ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಮನವಿ ಸಲ್ಲಿಸಿದರು.
ಯುವಕರಲ್ಲಿ ಹೃದಯಾಘಾತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆತಂಕ ಹುಟ್ಟಿಸಿದೆ. ಆರೋಗ್ಯವಾಗಿರುವ ಅನೇಕ ಯುವಕರು ಹೃದಯ ಸಂಬಂಧಿ ತೊಂದರೆಗಳಿಂದ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಕುಟುಂಬ ಮತ್ತು ಸಮುದಾಯದ ಮೇಲೆ ಆಘಾತಕಾರಿ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಕರ್ನಾಟಕ ಹಾಗೂ ವಿಶೇಷವಾಗಿ ಹಾಸನ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ ಎಂದ ಅವರು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಉದ್ಯೋಗ ಸ್ಥಳಗಳಲ್ಲಿ 40 ವರ್ಷ ವಯೋಮಿತಿಯ ಎಲ್ಲರಿಗೆ ಕಡ್ಡಾಯ ಹೃದಯ ತಪಾಸಣೆಯನ್ನು ನಡೆಸಬೇಕು. ಆಕಸ್ಮಿಕ ಹೃದಯ ಸ್ತಂಭನ ತಡೆಗೆ ರಾಷ್ಟ್ರೀಯ ಡಿಜಿಟಲ್ ರಿಜಿಸ್ಟರ್ ಸ್ಥಾಪನೆ ಮಾಡಬೇಕು. ಸಂಗ್ರಹಿತ ಮಾಹಿತಿಯಿಂದ ಸಂಶೋಧನೆ ಮತ್ತು ತಡೆಗಟ್ಟುವ ಕಾರ್ಯತಂತ್ರಗಳು ರೂಪಿಸಲು ಸಹಕಾರ ನೀಡಬೇಕು ಎಂದು ಕೋರಿದರು.
ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಹೃದಯ ತಪಾಸಣಾ ವಾಹನಗಳನ್ನು ಮಂಜೂರು ಮಾಡಬೇಕು. ಹಾಸನ ಸೇರಿದಂತೆ ಆಯ್ದ ಪೈಲಟ್ ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭಿಸುವ ಮೂಲಕ ತ್ವರಿತ ಚಿಕಿತ್ಸೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಕ್ರೀಡಾ ಕ್ಷೇತ್ರ ಹಾಗೂ ಹೆಚ್ಚಿನ ಒತ್ತಡದ ಉದ್ಯೋಗಗಳಲ್ಲಿ ಭಾಗವಹಿಸುವ ಮೊದಲು ಕಡ್ಡಾಯ ಹೃದಯ ತಪಾಸಣೆಗೆ ರಾಷ್ಟ್ರೀಯ ಮಾರ್ಗಸೂಚಿ ಹೊರಡಿಸಬೇಕು ಎಂದು ಮನವಿ ಮಾಡಿದರು.
ಯುವಕರಲ್ಲಿ ಉಲ್ಬಣಗೊಳ್ಳುತ್ತಿರುವ ಅಧಿಕ ರಕ್ತದೊತ್ತಡ ಮಧುಮೇಹ ಜೀವನಶೈಲಿ ಹಾಗೂ ಆನುವಂಶಿಕ ಕಾರಣಗಳಿಂದಾಗಿ ಹೃದಯ ಸಮಸ್ಯೆ ಹೆಚ್ಚಾಗುತ್ತಿದ್ದು ರಾಷ್ಟ್ರೀಯ ಮಟ್ಟದಲ್ಲಿ ಕ್ರಮದ ಅಗತ್ಯವಿದೆಶ್ರೇಯಸ್ ಪಟೇಲ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.