ADVERTISEMENT

ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

ಸುಭಿಕ್ಷೆ, ಶಾಂತಿ, ನೆಮ್ಮದಿ, ರೈತರ ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ: ಸಿ.ಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 1:51 IST
Last Updated 16 ಅಕ್ಟೋಬರ್ 2025, 1:51 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆಯ ಕಲಾ ತಂಡದವರು ಜಗ್ಗಲಿಗೆ ಬಾರಿಸಿದರು 
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆಯ ಕಲಾ ತಂಡದವರು ಜಗ್ಗಲಿಗೆ ಬಾರಿಸಿದರು    
ಇದುವರೆಗೆ 8 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ | ನಾಲ್ಕರಿಂದ ಐದು ತಾಸು ದರ್ಶನದ ಅವಧಿ | ದೂರದಿಂದ ಬರುವ ಭಕ್ತರಿಗೆ ಮೂಲಸೌಲಭ್ಯ ವ್ಯವಸ್ಥೆ 

ಹಾಸನ: ‘ಎಲ್ಲ ಧರ್ಮಗಳ ದೇವರ ಆಶಯವೂ ಮನುಷ್ಯ ಪ್ರೀತಿ ಮತ್ತು ಸೌಹಾರ್ದದ ಬದುಕು. ದಕ್ಕೆ ತಕ್ಕಂತೆ ನಾವೆಲ್ಲರೂ ಸಹೃದಯತೆಯಿಂದ ಮನುಷ್ಯ ಧರ್ಮವನ್ನು ಪಾಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮದು ಕುವೆಂಪು ’ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟ ಆಗಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ’ ಎಂದರು.

‘ಈ ಬಾರಿ ಅಗತ್ಯಕ್ಕಿಂತ ಹೆಚ್ವು ಮಳೆ ಬಿದ್ದು, ರೈತರಿಗೆ ಆಗಿರುವ ನಷ್ಟ ಭರಿಸಲು ಎನ್‌ಡಿಆರ್‌ಎಫ್‌ ನಿಧಿ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ಪರಿಹಾರ ನೀಡುತ್ತಿದೆ. ಹಿಂದೆಂದೂ ನೀಡದಷ್ಟು ಬೆಳೆ ಹಾನಿ ಪರಿಹಾರ ನಾವು ನೀಡಿದ್ದೇವೆ. ಮುಂದಿನ ವರ್ಷ ಬೆಳೆ ಹಾನಿ ಪರಿಸ್ಥಿತಿ ಬರದಿರಲಿ ಎಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ADVERTISEMENT

‘ಜಾತ್ರೆಯಲ್ಲಿ ಯಾವುದೇ ರೀತಿಯ ವಿಐಪಿ ಸಂಸ್ಕೃತಿಗೆ ಮಣೆ ಹಾಕದೇ, ಶ್ರೀಸಾಮಾನ್ಯರ ದರ್ಶನಕ್ಕೆ ಆದ್ಯತೆ ನೀಡಿದ ಸರ್ಕಾರದ ಪ್ರಯತ್ನಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳು ಅಭಿನಂದನಾರ್ಹರು. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದರು.

8 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ:

‘ಸೋಮವಾರದಿಂದ ಬುಧವಾರ ಮುಂಜಾನೆವರೆಗೂ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದು, ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೂ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ. ಆದ್ದರಿಂದ ದರ್ಶನದ ಅವಧಿ ನಾಲ್ಕರಿಂದ ಐದು ಗಂಟೆ ತಗಲುತ್ತಿದೆ’ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ದರ್ಶನೋತ್ಸವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಶೇ 90ರಷ್ಟು ಮಂದಿ ಶ್ರಮಿಕ ವರ್ಗದವರು, ಶೇ 70ಕ್ಕೂ ಹೆಚ್ಚು ಮಹಿಳೆಯರೇ ಬರುತ್ತಿದ್ದಾರೆ. ನಡುರಾತ್ರಿ 3 ಗಂಟೆಯ ಸಮಯದಲ್ಲೂ ಸಾಲಿನಲ್ಲಿ ಸಾವಿರಾರು ಮಂದಿ ನಿಂತು ದರ್ಶನ ಪಡೆಯುತ್ತಿರುವುದು ಶಕ್ತಿ ಯೋಜನೆಯ ಪರಿಣಾಮ’ ಎಂದರು.

‘ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು ಸೇರಿದಂತೆ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಿದ್ದಾರೆ. 120 ಶೌಚಾಲಯ, ಕುಡಿಯುವ ನೀರು, ಮಜ್ಜಿಗೆ, ವಾಟರ್ ಪ್ರೂಫ್ ಟೆಂಟ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದರು.

ದರ್ಶನೋತ್ಸವದ ಆರನೇ ದಿನವಾದ ಬುಧವಾರ ನಟಿಯರಾದ ಶ್ರುತಿ, ಮಾಳವಿಕಾ, ಜಯಮಾಲ, ನಟ ಶಶಿಕುಮಾರ್ ದರ್ಶನ ಪಡೆದರು.

ಸಚಿವ ರಾಮಲಿಂಗಾರಡ್ಡಿ, ಶಾಸಕ ಕೆ.ಎಂ. ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್, ಹುಡಾ ಅಧ್ಯಕ್ಷ ಪಟೇಲ್‌ ಶಿವಪ್ಪ, ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ, ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ಎಸ್ಪಿ ಮೊಹಮ್ಮದ್ ಸುಜೀತಾ ಹಾಜರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು 
ಹಾಸನಾಂಬ ಜಾತ್ರೆಗೆ ಹೆಚ್ಚುವರಿ ಅನುದಾನದ ಅಗತ್ಯ ಬಿದ್ದರೆ ನೆರವು ನೀಡಲಾಗುವುದು
ಸಿದ್ದರಾಮಯ್ಯ ಮುಖ್ಯಮಂತ್ರಿ
ಹಾಸನಾಂಬ ದೇವಿಯ ದರ್ಶನ ಪಡೆದ ನಟಿಯರಾದ ಜಯಮಾಲಾ ಮಾಳವಿಕಾ ಹಾಗೂ ಶ್ರುತಿ ಅವರು ಸಚಿವ ಕೃಷ್ಣ ಬೈರೇಗೌಡರ ಜೊತೆ ಮಾತುಕತೆ ನಡೆಸಿದರು 
ಹಾಸನಾಂಬ ದೇವಸ್ಥಾನದಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಿರುವುದು 

ಶಿಷ್ಟಾಚಾರದ ವಾಹನದಲ್ಲೇ ಬಂದ ಸಿ.ಎಂ

ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಶಿಷ್ಟಾಚಾರದ ವಾಹನದಲ್ಲೇ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಕೃಷ್ಣ ಬೈರೇಗೌಡ ಸ್ವಾಗತಿಸಿದರು. ಜಾನಪದ ಕಲಾತಂಡಗಳು ಜಗ್ಗಲಿಗೆ ಬಾರಿಸಿ ಕೊಂಬು ಕಂಸಾಳೆ ಊದಿ ಸ್ವಾಗತಿಸಿದವು. ಸಿದ್ದರಾಮಯ್ಯ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಮಂಗಳವಾದ್ಯಗಳೊಂದಿಗೆ ದೇವಿ ದರ್ಶನಕ್ಕೆ ಕರೆದೊಯ್ಯಲಾಯಿತು. ಸಿದ್ದರಾಮಯ್ಯ ಮೂರನೇ ಬಾರಿ ದೇವಿ ದರ್ಶನ ಪಡೆದರು. ಇದೇ ವೇಳೆ ದರ್ಬಾರ್ ಗಣಪತಿ ಹಾಗೂ ಸಿದ್ದೇಶ್ವರಸ್ವಾಮಿ ದರ್ಶನ ಪಡೆದರು.

ಮಧ್ಯಾಹ್ನ ನೈವೇದ್ಯದ ಸಮಯದಲ್ಲಿ ಗರ್ಭಗುಡಿಯ ಬಾಗಿಲು ಬಂದ್ ಮಾಡಿದ್ದ ಸಂದರ್ಭದಲ್ಲಿ ಬ್ಯಾರಿಕೇಡ್‌ನಲ್ಲಿಯೇ ಕುಳಿತು ವಿಶ್ರಾಂತಿ ಪಡೆದ ಜನರು 

ಸುಗಮ ದರ್ಶನಕ್ಕೆ ಒತ್ತು

ಮಂಗಳವಾರ ರಾತ್ರಿ ಸುಮಾರು ಎಂಟು ಗಂಟೆಯಿಂದ ಧಾರಾಕಾರ ಮಳೆಯ ನಡುವೆಯೂ ಸಚಿವ ಕೃಷ್ಣ ಬೈರೇಗೌಡರು ಛತ್ರಿ ಹಿಡಿದು ಜನರ ಸಾಲಿನಲ್ಲಿ ತೆರಳಿ ಸಮಸ್ಯೆ ಆಲಿಸಿದರು. ಬುಧವಾರ ಬೆಳಿಗ್ಗೆ ಎಂಟು ಗಂಟೆಗೆ ದೇವಸ್ಥಾನದ ಆವರಣಕ್ಕೆ ಬಂದು ಸುಗಮ ದರ್ಶನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸನಾಂಬ ದೇವಸ್ಥಾನದಲ್ಲಿ ಬುಧವಾರ ಸಾಮಾನ್ಯ ದರ್ಶನದ ಸಾಲಿನಲ್ಲಿ ನಿಂತಿದ್ದ ಅಪಾರ ಸಂಖ್ಯೆಯ ಜನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.