ADVERTISEMENT

ಶ್ರವಣಬೆಳಗೊಳದಲ್ಲಿ ಸಿದ್ಧಚಕ್ರ ಮಹಾಮಂಡಲ ವಿಧಾನ ಸಂಪನ್ನ

ಶ್ರವಣಬೆಳಗೊಳದಲ್ಲಿ 8 ದಿನ ಜರುಗಿದ ಭಕ್ತಿಯ ವೈಭವದ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 1:50 IST
Last Updated 13 ಜುಲೈ 2025, 1:50 IST
ಶ್ರವಣಬೆಳಗೊಳದಲ್ಲಿ ಜರುಗಿದ ಸಿದ್ಧಚಕ್ರ ಮಹಾಮಂಡಲ ವಿಧಾನದ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರು
ಶ್ರವಣಬೆಳಗೊಳದಲ್ಲಿ ಜರುಗಿದ ಸಿದ್ಧಚಕ್ರ ಮಹಾಮಂಡಲ ವಿಧಾನದ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರು   

ಶ್ರವಣಬೆಳಗೊಳ: ಕ್ಷೇತ್ರದಲ್ಲಿ 8 ದಿನಗಳ ಆಷಾಢ ಮಾಸದ ಅಷ್ಟಾಹ್ನಿಕ ಮಹಾಪರ್ವದಲ್ಲಿ ಸಿದ್ಧಚಕ್ರ ಮಹಾಮಂಡಲ ವಿಧಾನವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

 ದೇಶದ ವಿವಿಧ ಭಾಗಗಳಿಂದ 39 ತ್ಯಾಗಿಗಳು  ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಅವರೊಂದಿಗೆ ಭಕ್ತ ಸಮೂಹವು ಹರಿದು ಬಂದಿದ್ದು ಆಕರ್ಷಣೆಯಾಗಿತ್ತು. ಆಚಾರ್ಯ ಸುವಿಧಿ ಸಾಗರ ಮಹಾರಾಜರು, ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳ ಸಾನಿಧ್ಯ ಮತ್ತು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಭಗವಾನ್ ಬಾಹುಬಲಿ, ಜಿನವಾಣಿ, ಸರಸ್ವತಿ ದೇವಿ, ಗಣಧರರು, ಕ್ಷೇತ್ರದ ಅದಿ ದೇವಿ ಕೂಷ್ಮಾಂಡಿನಿ ದೇವಿಗೆ, ಎಲ್ಲ ಗುರು ಮುನಿ ಪರಂಪರೆಯ ತ್ಯಾಗಿಗಳಿಗೆ ಅರ್ಘ್ಯಗಳನ್ನು ಸಮರ್ಪಿಸಲಾಯಿತು. ಲಿ 710 ಜನ ವ್ರತಿಕರು   ಸಿದ್ಧಚಕ್ರ ಯಂತ್ರಕ್ಕೆ ದ್ರವ್ಯಗಳನ್ನು ಸಮರ್ಪಿಸಿದರು.

ADVERTISEMENT

ಅಲಂಕರಿಸಿ ರಚಿಸಿದ್ದ ಸಮವಸರಣ ಮಂಟಪದಲ್ಲಿ ವಿರಾಜಮಾನರಾಗಿದ್ದ ಚತುರ್ಮುಖ ಜಿನರಿಗೆ 2040 ಅರ್ಘ್ಯಗಳನ್ನು ಸಮರ್ಪಿಸಿದರು. ಜಯಮಾಲಾ ಪೂರ್ಣಾರ್ಘ್ಯದೊಂದಿಗೆ ಮಹಾಶಾಂತಿಧಾರಾ ಮಾಡಿ ಜಯಘೋಷಗಳೊಂದಿಗೆ ಸಿದ್ಧಚಕ್ರ ಮಹಾಮಂಡಲ ವಿಧಾನದ ಮಂಗಲ ಕಲಶವನ್ನು ವಿಸರ್ಜಿಸಲಾಯಿತು.

ನಿತ್ಯ ತೀರ್ಥಂಕರರಿಗೆ, ಸಿದ್ಧ ಭಗವಾನರಿಗೆ ಅಭಿಷೇಕ ನಡೆಸಲಾಯಿತು. ಪೂಜಾಷ್ಟಕಗಳಿಗೆ ಮತ್ತು ಸಂಜೆ ಆರತಿಗೆ ಸಂಗೀತವನ್ನು ಉದ್ಗಾಂವನ ಸುನೀಲ್ ಚೌಗಲೆ ತಂಡ ಇಂಪಾಗಿ ಹಾಡಿ ಭಕ್ತರನ್ನು ರಂಜಿಸಿತು.  ಮುಂಬೈ ನಗರದ ಭಕ್ತರು ಸೌಧರ್ಮ ಇಂದ್ರ, ಇಂದ್ರಾಣಿಯಾಗಿ ಪೂಜೆ ನೆರವೇರಿಸಿದರು.  ರಾಜ್ಯ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ನಾಂದಣಿ, ಸೊಲ್ಲಾಪುರದ ಭಕ್ತರು ಪಾಲ್ಗೊಂಡಿದ್ದರು.

ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಿದ್ಧಚಕ್ರ ಮಹಾಮಂಡಲ ವಿಧಾನವು ಜೈನಧರ್ಮದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.  ಅನುಷ್ಠಾನದಿಂದ ಎಲ್ಲ ರೀತಿಯ ಮಹಾವ್ಯಾದಿಗಳು ನಿವಾರಣೆಯಾಗಿ, ಪೂಜೆಯ ಫಲದಿಂದ ಇಷ್ಟಾರ್ಥ ಸಿದ್ಧಿಸಿ, ಮಂಗಲ ಕಾರ್ಯಗಳು ನೆರವೇರಿ ಶಾಂತಿ ಲಭಿಸಲಿದೆ ಎಂದರು.

ಶ್ರವಣಬೆಳಗೊಳದಲ್ಲಿ ಜರುಗಿದ ಸಿದ್ಧಚಕ್ರ ಮಹಾಮಂಡಲ ವಿಧಾನದಲ್ಲಿ ರಚಿಸಿದ್ದ ಸಮವಸರಣ ಮಂಟಪದಲ್ಲಿ ವಿರಾಜಮಾನರಾಗಿದ್ದ ಜಿನ ಭಗವಂತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.