ADVERTISEMENT

5 ಸಾವಿರಕ್ಕೂ ಅಧಿಕ ಕಂಠಗಳಲ್ಲಿ ಗೀತಗಾಯನ

ಶಾಲಾ ಮಕ್ಕಳು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 16:30 IST
Last Updated 28 ಅಕ್ಟೋಬರ್ 2021, 16:30 IST
ಕನ್ನಡಕ್ಕಾಗಿ ನಾವು ಕಾರ್ಯಕ್ರಮದ ಅಂಗವಾಗಿ ಕಲಾವಿದರು ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್‌ ಮೈದಾನದಲ್ಲಿ ಕನ್ನಡ ಗೀತೆಗಳ ಗಾಯನ ಪ್ರಸ್ತುತ ಪಡಿಸಿದರು (ಎಡಚಿತ್ರ). ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು ಕನ್ನಡ ಗೀತಗಾಯನದಲ್ಲಿ ಭಾಗವಹಿಸಿದ್ದರು
ಕನ್ನಡಕ್ಕಾಗಿ ನಾವು ಕಾರ್ಯಕ್ರಮದ ಅಂಗವಾಗಿ ಕಲಾವಿದರು ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್‌ ಮೈದಾನದಲ್ಲಿ ಕನ್ನಡ ಗೀತೆಗಳ ಗಾಯನ ಪ್ರಸ್ತುತ ಪಡಿಸಿದರು (ಎಡಚಿತ್ರ). ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು ಕನ್ನಡ ಗೀತಗಾಯನದಲ್ಲಿ ಭಾಗವಹಿಸಿದ್ದರು   

ಹಾಸನ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಗುರುವಾರ ನಡೆದ ಸಾಮೂಹಿಕ ಕನ್ನಡ ಗೀತಗಾಯನ
ಮಾತಾಡ್‌ ಮಾತಾಡ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ಐದು ಸಾವಿರಕ್ಕೂ ಅಧಿಕ ಜನರು ಮೂರು ಕನ್ನಡ ಗೀತೆಗಳಿಗೆ
ಧ್ವನಿಯಾದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್‌ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್ ಸೇರಿದಂತೆ ಸಾವಿರಾರು ಮಂದಿ ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಶ್ರೇಷ್ಠತೆ ಸಾರುವ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ಕೆ.ನಿಸಾರ್ ಅಹಮದ್‌
ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’
ಗೀತೆಗಳನ್ನು ಹಾಡಿದರು.

ADVERTISEMENT

ಸಮಾರಂಭದಲ್ಲಿ ವಿವಿಧ ಶಾಲೆಗಳ, ಕಚೇರಿಗಳ ಐದು ಸಾವಿರಕ್ಕೂ ಹೆಚ್ಚು
ಮಂದಿ ಗಾಯನ ಪ್ರಸ್ತುತ ಪಡಿಸಿದರು.

ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮನ್ನು ಅ. 30ರವರೆಗೆ ನಾಡ ಹಬ್ಬವನ್ನಾಗಿ ಸಂಭ್ರಮಿಸಲು ತೀರ್ಮಾನಿಸಲಾಗಿದೆ. ಈ
ಕಾರ್ಯಕ್ರಮವನ್ನು ವಿದೇಶಗಳಲ್ಲಿಯೂ ಆಚರಿಸಲಾಗುತ್ತಿದೆ. ಕನ್ನಡವನ್ನು ಇನ್ನಷ್ಟೂ ಜನಪ್ರಿಯಗೊಳಿಸಬೇಕಾಗಿದೆ. ಎಲ್ಲೇ ಇದ್ದರೂ ತಂದೆ, ತಾಯಿ ಗೌರವಿಸುವ ರೀತಿ ಕನ್ನಡ ಭಾಷೆ ಗೌರವಿಸಬೇಕು’ ಎಂದು ಹೇಳಿದರು.

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ‘ಬೇರೆ ರಾಜ್ಯಗಳಿಂದ ಬಂದಿರುವವರಿಗೆ ಕನ್ನಡ ಭಾಷೆ ಕಲಿಸುವುದರ
ಜತೆಗೆ ಕನ್ನಡ ನಾಡು ನುಡಿ, ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಯುವ ಜನತೆ ಸೇರಬೇಕು’ ಎಂದು ಸಲಹೆ ನೀಡಿದರು.

ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗ ಳಲ್ಲಿ, ಉದ್ಯಾನ, ಐತಿಹಾಸಿಕ ಸ್ಥಳ ಸೇರಿ ದಂತೆ 15ಕಡೆ 25 ಸಾವಿರಕ್ಕೂ ಅಧಿಕ ಮಂದಿ ಸಮೂಹ ಗಾಯನದಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಕನ್ನಡ ಭಾಷೆ ಕುರಿತು ಸಂಕಲ್ಪ ವಿಧಿ ಬೋಧಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ ಪರಮೇಶ್, ನಗರಸಭೆ ಅಧ್ಯಕ್ಷ ಆರ್‌. ಮೋಹನ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಕನ್ನಡ ‌ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಹಾಜರಿದ್ದರು.

ಕನ್ನಡ ಗೀತಗಾಯನ

ಚನ್ನರಾಯಪಟ್ಟಣ: ತಾಲ್ಲೂಕು ಆಡಳಿತದ ವತಿಯಿಂದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಬಿಜಿಎಸ್ ಸಹಯೋಗದಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿ ಉಪನ್ಯಾಸಕರು, ವಿದ್ಯಾರ್ಥಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯ ಸಂಗೀತ, ನೃತ್ಯ ಅಕಾಡೆಮಿ ಸದಸ್ಯೆ ಸಿ.ಆರ್. ರಮ್ಯಾ, ಗಾಯಕ ಮಂಜುನಾಥ್ ಹಿರಿಬಿಳ್ತಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಬಿ.ಇಡಿ,. ಕಾಲೇಜು, ಪಿಯು ಕಾಲೇಜು, ಐಟಿಐ ಕಾಲೇಜು, ಬಿಜಿಎಸ್ ಪಿಯು ಕಾಲೇಜು, ಪ್ರೌಢಶಾಲೆ ವಿದ್ಯಾರ್ಥಿಗಳು, ನಾಗಶ್ರೀ ಶಾಲೆಯ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು ಹಾಡಿದರು.

ಇವರೊಂದಿಗೆ ಶಾಸಕ ಬಾಲಕೃಷ್ಣ, ಗ್ರೇಡ್-2 ತಹಶೀಲ್ದಾರ್ ಮರಿಯಯ್ಯ, ಪುರಸಭಾಧ್ಯಕ್ಷ ಎಚ್.ಎನ್. ನವೀನ್, ಮುಖ್ಯಾಧಿಕಾರಿ ಎಚ್.ಟಿ. ಕೃಷ್ಣಮೂರ್ತಿ, ತಾ.ಪಂ. ಇಒ ಡಿ.ಬಿ. ಸುನೀಲ್‍ಕುಮಾರ್, ಡಾ.ಎ.ಎನ್. ಕಿಶೋರ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪುಟ್ಟಸ್ವಾಮಿ, ಎಇಇ ಕಾಳೇಗೌಡ, ಬಿಇಒ ಎನ್.ಜೆ. ಸೋಮನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ವಿಜಯಕುಮಾರ್, ಅಧಿಕಾರಿಗಳಾದ ಮಹದೇವ್, ನಳಿನಾ, ಆನಂದ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎನ್. ಶಂಕರೇಶ್, ಡಾ.ಎಚ್.ಪಿ. ಶಂಕರ್, ಶಂಕರೇಗೌಡ, ಮಳಲೀಗೌಡ, ಬಿಜಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಸಿ.ಸಿ. ಕುಮಾರ್, ಎವಿಕೆ ಕಾಲೇಜು ನಿವೃತ್ತ ಸಹಪ್ರಾಧ್ಯಾಪಕ ಡಾ. ಎಚ್.ಎಲ್. ಮಲ್ಲೇಶಗೌಡ, ನಾಗಶ್ರೀ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಾಸಿರಾಬಾನು, ದೈಹಿಕ ಶಿಕ್ಷಣ ನಿರ್ದೇಶಕ ಜೆ. ಭಾಸ್ಕರ ಸೇರಿ ಉಪನ್ಯಾಸಕ, ಸಿಬ್ಬಂದಿ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.