ಹಾಸನ: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಗತಿಗೆ ಮೀಸಲಿಟ್ಟ ಹಣ ದುರ್ಬಳಕೆ ಸಂಬಂಧ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನೀತಿ ವಿರೋಧಿಸಿ ಬಹುಜನ ಸಮಾಜ ಪಕ್ಷದಿಂದ (ಬಿಎಸ್‌ಪಿ) ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜುಲೈ 26ರಂದು ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಗಂಗಾಧರ್ ಬಹುಜನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದ ನೂರಾರು ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಂಡಿದೆ. 2023–24 ಮತ್ತು 2024–25ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟ ₹25,398 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಆ ಸಮುದಾಯದ ಕತ್ತು ಕುಯ್ಯುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದು ದೂರಿದರು.
‘2014ರಿಂದ ಇಲ್ಲಿಯವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಮೂರು ಸರ್ಕಾರಗಳು ಸುಮಾರು ₹70 ಸಾವಿರ ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ದಲಿತ ಸಮುದಾಯಕ್ಕೆ ಮಾಡಿರುವ ಮಹಾನ್ ದ್ರೋಹ’ ಎಂದರು.
ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಲು ನಾಂದಿ ಹಾಡಿದ್ದೇ ಕಾಂಗ್ರೆಸ್ ಸರ್ಕಾರ. ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಇದೇ ದಾರಿಯನ್ನು ಹಿಡಿದು, ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಹಿಂಜರಿಯಲಿಲ್ಲ. 10 ವರ್ಷಗಳಲ್ಲಿ ₹2.56 ಲಕ್ಷ ಕೋಟಿ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಲಾಗಿತ್ತು. ಈ ಹಣವನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ, ರಾಜ್ಯದಲ್ಲಿ ದಲಿತರು ಉತ್ತಮ ಸ್ಥಿತಿ ಹೊಂದುತ್ತಿದ್ದರು. ಆದರೆ, ರಾಜಕೀಯ ನಾಯಕರ ಕೆಟ್ಟ ಆಡಳಿತದಿಂದ ಇಂದಿಗೂ ಆ ಸಮುದಾಯದ ಅಭಿವೃದ್ಧಿ ಆಗಿಲ್ಲ’ ಎಂದು ಆರೋಪಿಸಿದರು.
‘ದಲಿತರ ನಾಯಕ ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಅಧಃಪತನ ಕಂಡಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಉಳಿಸಿಕೊಂಡಿಲ್ಲ’ ಎಂದರು.
‘ವಾಲ್ಮೀಕಿ ನಿಗಮದ ಅವ್ಯವಹಾರ ಸಮರ್ಥಿಸಿಕೊಳ್ಳುವ ಭರದಲ್ಲಿ, ಬಿಜೆಪಿ ಸರ್ಕಾರದಲ್ಲಿ 21 ಹಗರಣಗಳು ನಡೆದಿವೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ಆರೋಪಗಳಲ್ಲಿ ಹುರುಳಿದ್ದರೆ, ಕಾಂಗ್ರೆಸ್ ಸರ್ಕಾರ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಶಿವಮ್ಮ, ಹರೀಶ್ ಅತ್ನಿ, ಲಕ್ಷ್ಮಣ ಕೀರ್ತಿ, ಕಿರಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.