ADVERTISEMENT

ಒಂದೇ ದಿನ ಆರು ಮಂದಿ ಸಾವು

275 ಕೋವಿಡ್ ಪ್ರಕರಣ ಪತ್ತೆ‌, 213 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:10 IST
Last Updated 20 ಸೆಪ್ಟೆಂಬರ್ 2020, 14:10 IST

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಆರ್ಭಟ ಮುಂದುವರಿದಿದ್ದು, ಭಾನುವಾರ ಆರು ಸೋಂಕಿತರ ಸಾವಿನೊಂದಿಗೆ
ಮೃತರ ಸಂಖ್ಯೆ 266 ತಲುಪಿದೆ.

ಮತ್ತೊಂದೆಡೆ 213 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಗುಣಮುಖರ ಸಂಖ್ಯೆ 10527
ತಲುಪಿದೆ. 275 ಸೋಂಕು ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 13,483ಕ್ಕೆ ಏರಿದೆ.

ಜ್ವರ, ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅರಸೀಕೆರೆ
ತಾಲ್ಲೂಕಿನ 60, 70 ವರ್ಷದ ಪುರುಷರು, ಬೇಲೂರು ತಾಲ್ಲೂಕಿನ 38 , ಅರಕಲಗೂಡು ತಾಲ್ಲೂಕಿನ
35 , ಹೊಳೆನರಸೀಪುರದ 75 ವರ್ಷದ ಪುರುಷ ಹಾಗೂ ಚನ್ನರಾಯಪಟ್ಟಣದ 55 ವರ್ಷದ ಮಹಿಳೆ
ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಕೋವಿಡ್‌ ನಿಯಮ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ADVERTISEMENT

ಸಕ್ರಿಯ ಪ್ರಕರಣಗಳ ಸಂಖ್ಯೆ 2691. ಕೋವಿಡ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಹೋಂ
ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 52 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಅರಸೀಕೆರೆ 31, ಚನ್ನರಾಯಪಟ್ಟಣ 67, ಆಲೂರು 21, ಹಾಸನ 102, ಹೊಳೆನರಸೀಪುರ 8,
ಅರಕಲಗೂಡು 32, ಬೇಲೂರು 7, ಸಕಲೇಶಪುರ 7 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿದ ವೇಳೆ ಕೋವಿಡ್‌ ಲಕ್ಷಣಗಳು ಇದ್ದರೆ ಅವರ ಗಮನಕ್ಕೆ ತರಬೇಕು. ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ಪರೀಕ್ಷೆ ಮಾಡಿಸಬೇಕು. ಪರಸ್ಪರ ಅಂತರ ಪಾಲನೆ ಜತೆಗೆ ಮಾಸ್ಕ್‌ ಧರಿಸಿ ಓಡಾಡಬೇಕು. ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದು ಕಡಿಮೆ ಮಾಡಬೇಕು. ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯುತ್ತಿರಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.