ಹಾಸನ: ಎಸ್.ಎಲ್. ಭೈರಪ್ಪ ಅವರನ್ನು ಬಲಪಂಥೀಯ ಲೇಖಕ ಎಂದು ನೋಡುವ ಬದಲು, ಅವರ ಬರವಣಿಗೆಯನ್ನು ಅರ್ಥೈಸಿಕೊಳ್ಳುವ ವ್ಯವಧಾನ ಬೆಳೆಸಿಕೊಳ್ಳಬೇಕು. ಅಂತರಂಗದ ಭಾವನೆಗಳನ್ನು ಅಕ್ಷರ ರೂಪಕ್ಕೆ ತಂದ ಶ್ರೇಷ್ಠ ಸಾಹಿತಿ ಅವರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಅವರ ಪುಸ್ತಕಗಳಲ್ಲಿ ಬಲಪಂಥವಿಲ್ಲ. ಭೈರಪ್ಪ ಅವರು ಅಧ್ಯಯನಶೀಲ ಬರಹಗಾರರು. ಅವರಷ್ಟು ಅಧ್ಯಯನ ಮಾಡಿ ಬರೆದವರನ್ನು ನಾನಂತೂ ಕಂಡಿಲ್ಲ ಎಂದರು.
ನನ್ನ ಬರಹದ ಸತ್ವ ಗ್ರಾಮೀಣ ಬದುಕು ಎಂಬುದು ಅವರ ನಿಲುವಾಗಿತ್ತು. ಜೀವನದಲ್ಲಿ ಎದುರಾಗುವ ನೋವು, ಸವಾಲುಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ ಎಂದರು.
ಐಟಿ-ಬಿಟಿ ಕೆಲಸಗಾರರಿಗೂ ಸಾಹಿತ್ಯದ ಅಭಿರುಚಿ ಬೆಳೆಸಿದವರು ಭೈರಪ್ಪ. ಗೃಹಭಂಗ, ವಂಶವೃಕ್ಷ, ನಾಯಿ ನೆರಳು, ತಬ್ಬಲಿಯು ನಿನಾದೆ ಮಗನೆ, ಅಂಚು, ಸಾಕ್ಷಿ, ದೂರ ಸರಿದರು, ಉತ್ತರಕಾಂಡ, ಯಾನ, ಮಂದ್ರ, ತಂತು ಸೇರಿ ಎಲ್ಲ ಕಾದಂಬರಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಬರೆದಂತೆ ಬದುಕಿದವರು ಭೈರಪ್ಪ ಎಂದರು.
ಹಾಸನದಲ್ಲಿ ಹಮಿಕೊಂಡಿದ್ದ ಹೊಯ್ಸಳ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ, ಎರಡು ದಿನ ಜಿಲ್ಲೆಯಲ್ಲಿ ಇದ್ದಿದ್ದು ಸ್ಮರಣೀಯ. ಅವರನ್ನು ಕಳೆದುಕೊಂಡು ಸಾಹಿತ್ಯ ವಲಯ ನಷ್ಟ ಕಂಡಿದೆ. ಅವರ ಆತ್ಮ ನಿಶ್ಚಿತವಾಗಿ ಶಾಂತವಾಗಿದೆ ಎಂದರು.
ಪತ್ರಕರ್ತ ಮಂಜು ಬನವಾಸೆ, ಕನ್ನಡಪರ ಹೋರಾಟಗಾರ ಬಾಳ್ಳುಗೋಪಾಲ್, ಲೇಖಕರಾದ ಗೊರೂರು ಅನಂತರಾಜು, ಸುವರ್ಣ ಶಿವಪ್ರಸಾದ್, ಸುಂದ್ರೇಶ್ ಮತ್ತಿತರರು ಮಾತನಾಡಿದರು.
ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಜಾವಗಲ್ ಪ್ರಸನ್ನ, ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಎಚ್.ಎನ್. ಚಂದ್ರಶೇಖರ್, ಆರ್.ಬಿ. ಶಂಕರ್, ಜ್ಞಾನದೀಕ್ಷ ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ನಂದನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕ್ರೀಡಾ ಕಾರ್ಯದರ್ಶಿ ಆಶಾ, ಶಿಕ್ಷಕಿ ಕುಸುಮಾ ಇತರರು ಹಾಜರಿದ್ದರು. ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ನಿರೂಪಿಸಿದರು.
ಜಿಲ್ಲಾ ಬರಹಗಾರರ ಸಂಘ:
ನಗರದ ಥಿಯೋಸಾಫಿಕಲ್ ಸೊಸೈಟಿಯಲ್ಲಿ ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು. ಭೈರಪ್ಪನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ, ಮೌನ ಆಚರಿಸಲಾಯಿತು.
ಕನ್ನಡದ ವಿದ್ವಾಂಸರಾದ ಪ್ರೊ. ಅನುಸೂಯಾ ಮಾತನಾಡಿ, ಪ್ಲೇಗ್ ಎಂಬ ಮಹಾ ಕಾಯಿಲೆಯಿಂದ ಇಡೀ ಕುಟುಂಬವನ್ನೆ ಕಳೆದುಕೊಂಡರು. ಹೆತ್ತ ತಾಯಿಯ ಸಾವಿನ ಮುಖ ನೋಡುವ ಅವಕಾಶ ದೊರೆಯದಿದ್ದರೂ, ಪ್ಲೇಗ್ ಕಾಯಿಲೆಯಿಂದ ಬದುಕುಳಿದ ಪವಾಡ ಪುರುಷ ಭೈರಪ್ಪನವರು. ದೇವರು ಕೆಲವರನ್ನು ಏಕೆ ಉಳಿಸುತ್ತಾನೆ ಎಂಬುದಕ್ಕೆ ಭೈರಪ್ಪನವರೇ ಸಾಕ್ಷಿ. ನುಡಿದಂತೆ ನಡೆದ ಧೀಮಂತ ಸಾಹಿತಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಹೇಳಿದರು.
ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ ಡಿ. ಉಡುವಾರೆ ಮಾತನಾಡಿ, ‘ಭೈರಪ್ಪನವರ ಒಂದೊಂದು ಕಾದಂಬರಿಯು ಒಂದೊಂದು ವೈಚಾರಿಕ ಹಿನ್ನಲೆ ಹೊಂದಿದ್ದು, ಸಂಶೋಧನತ್ಮಾಕ ಕೃತಿಗಳಾಗಿವೆ’ ಎಂದರು.
ಪತ್ರಕರ್ತ ವೆಂಕಟೇಶ ಮಾತನಾಡಿ, ‘ಸಾಹಿತ್ಯದೊಂದಿಗೆ ಸಾಮಾಜಿಕ ಕಾಳಜಿ ಇಟ್ಟುಕೊಂಡಿದ್ದ ಭೈರಪ್ಪನವರು. ಹುಟ್ಟೂರಿನ ಋಣ ತೀರಿಸಲು ಸಂತೇಶಿವರದ ಆಸುಪಾಸಿನ ನಲ್ಲಿರುವ ಹತ್ತಾರು ಕೆರೆಗಳಿಗೆ ನೀರು ತುಂಬಿಸಲು ನೆರವಾಗಿದ್ದರು’ ಎಂದರು.
ಬರಹಗಾರರ ಸಂಘದ ಕಾರ್ಯದರ್ಶಿ ದಿಬ್ಬೂರು ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಗ್ಯಾರಂಟಿ ರಾಮಣ್ಣ, ಭೈರಪ್ಪನವರ ಕುರಿತು ಸ್ವರಚಿತ ಕವನ ವಾಚಿಸಿದರು. ಜಯಶ್ರೀ ಬಾಲಕೃಷ್ಣ, ತಮ್ಮ ಹಾಗೂ ಭೈರಪ್ಪನವರ ಒಡನಾಟದ ಹಂಚಿಕೊಂಡರು. ಪತ್ರಕರ್ತೆ ಲೀಲಾವತಿ ಮಾತನಾಡಿದರು. ಶಿಕ್ಷಕಿ ಗಿರಿಜಾ ನಿರ್ವಾಣಿ, ಇಂದಿರಾ ಲೋಕೇಶ್, ಮುಖ್ಯ ಶಿಕ್ಷಕಿ ನೇತ್ರಾವತಿ. ಗೊರೂರು ಅನಂತರಾಜು, ಯಾಕೂಬ್ ಗೊರೂರು, ಸುಕನ್ಯಾ ಮುಕುಂದ, ಡಾ.ಬರಾಳು ಶಿವರಾಮ, ರೇಖಾ ಪ್ರಕಾಶ್, ವಾಣಿ ಮಹೇಶ, ಚನ್ನೇಗೌಡ, ಎ.ಎಚ್. ಬೋರೇಗೌಡ, ಇಂದಿರಾ, ಬಾಲಕೃಷ್ಣ, ಲೀಲಾವತಿ, ಮೋಹನ್, ದಯಾನಂದ. ವಿಶ್ವಾಸ್ ಡಿ. ಗೌಡ ಸಕಲೇಶಪುರ, ಲೋಕೇಶ್ ಹೊಳೆನರಸೀಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.