ಹಾಸನ: ಜೈವಿಕ ವಿಧಾನ ಅಳವಡಿಸಿಕೊಳ್ಳುವುದರಿಂದ ಚಿಕೂನ್ ಗುನ್ಯ ಹಾಗೂ ಡೆಂಗಿ ಕಾಯಿಲೆ ನಿಯಂತ್ರಿಸಬಹುದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜ್‍ಗೋಪಾಲ್ ಹೇಳಿದರು.
ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್ ವಿಬಿಡಿಸಿಪಿ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಡೆಂಗಿ, ಚಿಕೂನ್ ಗುನ್ಯ ಕಾಯಿಲೆ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಸೊಳ್ಳೆಗಳು ಉತ್ಪತಿಯಾಗದಂತೆ ಎಚ್ಚರ ವಹಿಸಿದರೆ ಕಾಯಿಲೆ ಹತೋಟಿಗೆ ತರಬಹುದು. ವಾಸಿಸುವ ಮನೆಗಳ ಸುತ್ತಮುತ್ತ ಸ್ವಚ್ಚತೆಗೆ ಆದ್ಯತೆ ನೀಡಬೇಕು. ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್, ಏರ್ ಕೂಲರ್ ಇತ್ಯಾದಿ ವಸ್ತುಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು, ನೀರನ್ನು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿಗಳಲ್ಲಿ ಸೊಳ್ಳೆಗಳು ಉತ್ಪತಿ ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಬಯಲಿನಲ್ಲಿ ನಿರುಪಯುಕ್ತ ತ್ಯಾಜ್ಯ ವಸ್ತುಗಳಾದ ಟೈರುಗಳು, ಎಳನೀರಿನ ಚಿಪ್ಪು, ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆಗಳ ಬಳಕೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸಿ ಕಚ್ಚದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ, ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಅದೇ ರೀತಿ ನಗರ ಪ್ರದೇಶಗಳಲ್ಲಿ ವಾರದ ಮೊದಲ ಹಾಗೂ ಮೂರನೇ ಶುಕ್ರವಾರ ಲಾರ್ವಗಳ ಸಮೀಕ್ಷೆ ಹಾಗೂ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿವೆ ಎಂದು ವಿವರಿಸಿದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹಿರಿಯ ಆರೋಗ್ಯ ಮೇಲ್ವಿಚಾರಕರಾದ ಮಂಜಪ್ಪ, ಜನಾರ್ಧನ್, ಜಯಪ್ರಕಾಶ್ ಹಾಗೂ ಸಹಾಯಕ ಸೈಮನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.