ADVERTISEMENT

ಸರ್ಕಾರಿ ನೇಮಕಾತಿಯಲ್ಲಿ ಕ್ರೀಡಾಪುಟಗಳಿಗೆ ಶೇ 2 ರಷ್ಟು ಮೀಸಲಾತಿ

ಜಿಲ್ಲಾ ಪೊಲೀಸ್‌ ಕ್ರೀಡಾಕೂಟ ಉದ್ಘಾಟಿಸಿದ ವಾಲಿಬಾಲ್‌ ಆಟಗಾರ ತರುಣ್‌ ಗೌಡ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:51 IST
Last Updated 20 ನವೆಂಬರ್ 2025, 4:51 IST
ಹಾಸನದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡಾಪಟು ತರುಣ್‌ಗೌಡ, ಕ್ರೀಡಾಕೂಟ ಉದ್ಘಾಟಿಸಿದರು.
ಹಾಸನದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡಾಪಟು ತರುಣ್‌ಗೌಡ, ಕ್ರೀಡಾಕೂಟ ಉದ್ಘಾಟಿಸಿದರು.   

ಹಾಸನ: ಸರ್ಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದ್ದು, ನನ್ನಂತೆಯೇ ಸಾವಿರಾರು ಕ್ರೀಡಾಪಟುಗಳ ಸರ್ಕಾರಿ ನೌಕರಿಯ ಕನಸಿಗೆ ಪೂರಕ ಅವಕಾಶ ದೊರಕಲಿದೆ ಎಂದು ಅಂತರರಾಷ್ಟ್ರೀಯ ವಾಲಿಬಾಲ್‌ ಆಟಗಾರ ಕೆ.ತರುಣ್‌ಗೌಡ ಹೇಳಿದರು.

ನಗರದ ಹೊಸಲೇನ್‌ ರಸ್ತೆ ಬಳಿ ಇರುವ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸರು ಎಂದರೇ ಸಮಾಜದ ರಕ್ಷಕರು ಮತ್ತು ನಮ್ಮ ಸೈನಿಕರು. 2005ರಿಂದ ನನೆಗುದಿಗೆ ಬಿದ್ದಿದ್ದ ಕ್ರೀಡಾ ಮೀಸಲಾತಿ ನೀತಿಯನ್ನು ಪುನರುಜ್ಜೀವನಗೊಳಿಸಿ, ರಾಜ್ಯ ಸರ್ಕಾರವು ಕ್ರೀಡಾ ವಲಯಕ್ಕೆ ಮತ್ತೆ ಚೈತನ್ಯ ತುಂಬಿರುವುದು ರಾಜ್ಯದ ನೂರಾರು ಕ್ರೀಡಾಪಟುಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಒಬ್ಬ ಕ್ರೀಡಾಪಟುವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ADVERTISEMENT

ಮಕ್ಕಳನ್ನು ಪುಸ್ತಕದ ಒತ್ತಡದಲ್ಲಿ ತಳ್ಳುತ್ತಿರುವ ಪೋಷಕರು ಜಾಗೃತರಾಗಬೇಕು. ಮಕ್ಕಳ ಭವಿಷ್ಯಕ್ಕೆ ಓದು ಮುಖ್ಯವಾದರೂ, ಅವರ ದೈಹಿಕ-ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಅನಿವಾರ್ಯ. ಈ ಮೀಸಲಾತಿ ಜಾರಿಯಿಂದ ಕ್ರೀಡೆ ಮೂಲಕ ಮಕ್ಕಳು ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆಯುವ ಅವಕಾಶ ಸಿಗಲಿದೆ. ಪೋಷಕರು ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

24 ಗಂಟೆಗಳ ಸೇವೆ ಸಲ್ಲಿಸುವ ಪೊಲೀಸ್‌ ಸಿಬ್ಬಂದಿ ನಿತ್ಯ ಕಾರ್ಯಭಾರದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರೀಡೆ ಒಂದು ಶಕ್ತಿಯ ಮೂಲವಾಗಲಿದೆ ಎಂದರು.

ಇದು ನಿಮ್ಮ ಆರೋಗ್ಯಕ್ಕಾಗಿ ಮಾತ್ರವಲ್ಲ, ಸಮಾಜದ ಸುರಕ್ಷತೆಗೂ ಅಗತ್ಯ. ನೀವು ಶಕ್ತಿಯುತವಾಗಿದ್ದರೆ, ಸಮಾಜವೂ ಶಕ್ತಿಯುತವಾಗಿರುತ್ತದೆ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಮತ್ತು ಹಾಸನಾಂಬೆಯ ಆಶೀರ್ವಾದ ಇರಲಿ. ಕ್ರೀಡಾ ಚಟುವಟಿಕೆಗಳು ಕೇವಲ ಸ್ಪರ್ಧೆಗೆ ಸೀಮಿತವಾಗದೇ, ಜೀವನಶೈಲಿಯಾಗಲಿ ಎಂದು ಆಶಿಸಿದರು.

ಪಾರಿವಾಳ ಮತ್ತು ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟ ಉದ್ಘಾಟಿಸಲಾಯಿತು. ಪೊಲೀಸರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಎಸ್. ತಮ್ಮಯ್ಯ, ವೆಂಕಟೇಶ್ ನಾಯ್ಡು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಕ್ರೀಡೆ ಮನುಷ್ಯನ ಜೀವನ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು– ಗೆಲುವುಗಳನ್ನು ಸಮಾನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು.
– ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.