ADVERTISEMENT

ಧರ್ಮಸ್ಥಳ ಪ್ರಕರಣ | ಎಸ್ಐಟಿ ತನಿಖಾ ವರದಿ ಮಂಡಿಸಲಿ: ಶಾಸಕ ವಿಶ್ವನಾಥ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 18:47 IST
Last Updated 16 ಆಗಸ್ಟ್ 2025, 18:47 IST
ಧರ್ಮಸ್ಥಳ ಚಲೋ ಅಂಗವಾಗಿ ಹಾಸನ ಹೊರವಲಯದ ಬೂವನಹಳ್ಳಿ ಬಳಿ ಸಾಗಿದ ಕಾರುಗಳು 
ಧರ್ಮಸ್ಥಳ ಚಲೋ ಅಂಗವಾಗಿ ಹಾಸನ ಹೊರವಲಯದ ಬೂವನಹಳ್ಳಿ ಬಳಿ ಸಾಗಿದ ಕಾರುಗಳು    

ಹಾಸನ: ‘ಧರ್ಮಸ್ಥಳ ಮಂಜುನಾಥ ಸ್ವಾಮಿಯ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರಿಗೆ ದೇವರು ಶಿಕ್ಷೆ ನೀಡಲಿ. ಸೋಮವಾರದ ವಿಧಾನಸಭಾ ಅಧಿವೇಶನದಲ್ಲಿ ಎಸ್‌ಐಟಿ ತನಿಖೆ ವರದಿಯನ್ನು ಸರ್ಕಾರ ಮಂಡಿಸಬೇಕು’ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಒತ್ತಾಯಿಸಿದರು.

ಧರ್ಮಸ್ಥಳ ಪರ ಬೆಂಬಲ ವ್ಯಕ್ತಪಡಿಸಿ ತಮ್ಮ ಬೆಂಬಲಿಗರೊಂದಿಗೆ ಸುಮಾರು 400ಕ್ಕೂ ಹೆಚ್ಚು ಕಾರುಗಳಲ್ಲಿ ಆರಂಭಿಸಿರುವ ಧರ್ಮಸ್ಥಳ ಚಲೋ ಯಾತ್ರೆಯ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸೌಜನ್ಯ ಪ್ರಕರಣದ ತನಿಖೆಗೆ ನಮ್ಮ ಅಡ್ಡಿಯಿಲ್ಲ. ಆದರೆ ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸವನ್ನು ವಿಚಾರವಾದಿಗಳು ಮತ್ತು ಧರ್ಮವಿರೋಧಿಗಳು ಮಾಡುತ್ತಿದ್ದಾರೆ. ಇದು ರಾಜ್ಯ ಮತ್ತು ದೇಶದ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ಕೃತ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನಾಮಿಕ ವ್ಯಕ್ತಿಯ ದೂರಿನ ಆಧಾರದ ಮೇಲೆ ಎಸ್‌ಐಟಿ ಉತ್ಪನನ ನಡೆಸಿರುವುದನ್ನು ಟೀಕಿಸಿದ ಅವರು, ‘ಅನಾಮಿಕನ ಮಾತಿಗೆ ಕಿವಿಗೊಟ್ಟು ತಪ್ಪು ಮಾಡಿದ್ದೇವೆ ಎಂದು ಸರ್ಕಾರಕ್ಕೆ ಅನಿಸಿರಬಹುದು. 13 ನೇ ಸ್ಥಳದಲ್ಲಿ ಏನೂ ಸಿಗಲಿಲ್ಲ. ಇಂತಹ ದೂರಿನ ಆಧಾರದಲ್ಲಿ ಇಡೀ ಧರ್ಮಸ್ಥಳವನ್ನೇ ಅಗೆಯಬೇಕೇ? ವಿಧಾನಸೌಧ ಕಟ್ಟುವಾಗ ಯಾರನ್ನಾದರೂ ಕೊಂದು ಸ್ಪೀಕರ್ ಕುರ್ಚಿಯ ಕೆಳಗೆ ಹೂತಿದ್ದೇವೆ ಎಂದರೆ ಅಗೆಯಲು ಸಾಧ್ಯವೇ ’ಎಂದು ಪ್ರಶ್ನಿಸಿದರು.

ADVERTISEMENT

‘ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಸುಳ್ಳು ಹೇಳಿದ್ದರೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ ಅವರು ವಿಶ್ವನಾಥ್, ಲಾಯರ್ ಜಗದೀಶ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.

‘ನನ್ನ ವಿರುದ್ಧವೂ ಅಪಪ್ರಚಾರ ನಡೆಯುತ್ತಿದೆ. ನನ್ನ ಹಕ್ಕುಗಳಿಗೆ ಚ್ಯುತಿಯಾಗುತ್ತಿದೆ. ಈ ಬಗ್ಗೆ ಸೋಮವಾರ ಅಧಿವೇಶನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸುತ್ತೇನೆ’ ಎಂದರು.

‘ಧರ್ಮಸ್ಥಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಕ್ಷೇತ್ರ ತುಂಬಿ ತುಳುಕಬೇಕು. ಜನರು ದೇವರ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು’ ಎಂದು ಮನವಿ ಮಾಡಿದರು.

ಮಂಜುನಾಥ ಸ್ವಾಮಿಯ ವಿರುದ್ಧ ಅಪಪ್ರಚಾರ ಮಾಡುವವರಿಗೆ ಸರ್ಕಾರದ ಶಿಕ್ಷೆ ಒಂದೆಡೆಯಾದರೆ ದೇವರ ಶಿಕ್ಷೆ ಮತ್ತೊಂದೆಡೆ
ಎಸ್‌.ಆರ್‌. ವಿಶ್ವನಾಥ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.