ಹಾಸನ: ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೋರಾಟ ಮಾಡಿ ಮಾದರಿಯಾಗಿರುವ ಶ್ರೀಕೃಷ್ಣ, ಸ್ನೇಹ, ಪ್ರೇಮದ ಪ್ರತೀಕ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಮತ್ತು ಶ್ರೀ ಕೃಷ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕೃಷ್ಣನು ಸಾಮಾನ್ಯನಾಗಿ ಜನಿಸಿ, ಅಸಾಮಾನ್ಯವಾದ ಸಾಧನೆ ಮಾಡಿದ್ದಾನೆ. ಒಬ್ಬ ಮನುಷ್ಯ ಅನುಭವಿಸುವ ಪ್ರತಿಯೊಂದು ಕಷ್ಟಗಳನ್ನು, ಪ್ರತಿಯೊಂದು ಹಂತದಲ್ಲಿ ಅನುಭವಿಸಿ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಮಿಂಚಿ ಮರೆಯಾದವರು ನುಲಿಯ ಚಂದಯ್ಯ. ಇವರು ಶಿವನೊಂದಿಗೆ ದಿಟ್ಟತನದಿಂದ ಅನುಸಂಧಾನ ಮಾಡಿಕೊಂಡವರು ಎಂದು ತಿಳಿಸಿದರು.
ಹೊಳೆನರಸೀಪುರ ಬಿ.ಆರ್.ಸಿ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಜಿ. ಪರಮೇಶ್ ಉಪನ್ಯಾಸ ನೀಡಿದರು. ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ. ತಾರಾನಾಥ್, ಸಮುದಾಯದ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.