ಸಾಂದರ್ಭಿಕ ಚಿತ್ರ
ಹಾಸನ: 2024-25 ನೇ ಸಾಲಿನಲ್ಲಿ ನಡೆದ ಎಸ್ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಹಾಗೂ ಎರಡೂ ಮರು ಪರೀಕ್ಷೆಗಳ ಗುಣಮಟ್ಟ ಹಾಗೂ ಉತ್ತೀರ್ಣ ಪ್ರಮಾಣದಲ್ಲಿ ಹಾಸನ ಜಿಲ್ಲೆ ಎ–ಶ್ರೇಣಿ ಪಡೆದುಕೊಂಡಿದೆ.
ರಾಜ್ಯದ ಎಲ್ಲ ಜಿಲ್ಲೆಗಳ ಪ್ರಗತಿಯ ಬಗ್ಗೆ ಅಂಕಿ–ಅಂಶ ಬಿಡುಗಡೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಟ್ಟಿಯಲ್ಲಿ 5 ಜಿಲ್ಲೆಗಳು ಎ– ಶ್ರೇಣಿ ಪಡೆದಿದ್ದು, ಇದರಲ್ಲಿ ಹಾಸನ ಜಿಲ್ಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮೂರನೇ ಸ್ಥಾನ ಹಾಗೂ ಉತ್ತೀರ್ಣ ಪ್ರಮಾಣದಲ್ಲಿ ನಾಲ್ಕನೇ ಸ್ಥಾನದೊಂದಿಗೆ ಎ ಶ್ರೇಣಿ ಪಡೆದಿದೆ.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 19,248 ವಿದ್ಯಾರ್ಥಿಗಳ ಪೈಕಿ 17,743 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.92.18 ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಶೇ 77.32 ರಷ್ಟು ಗುಣಮಟ್ಟದ ಶಿಕ್ಷಣ ನೀಡಲಾಗಿದೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಶ್ರಮವು ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಹತ್ತು ವರ್ಷದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಮನನ ಮಾಡಲು ತಿಳಿಸಲಾಗಿತ್ತು. ವಿಷಯವಾರು ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ, ಯಾವ ಪ್ರಶ್ನೆಗಳಿಗೆ ಎಷ್ಟು ಪ್ರಮಾಣದಲ್ಲಿ ನಿರ್ದಿಷ್ಟವಾದ ಉತ್ತರ ಬರೆಯಬೇಕು ಎಂಬುದರ ಬಗ್ಗೆ ತಿಳಿಸಲಾಗಿತ್ತು. ಅದರಂತೆಯೇ ಪ್ರತಿ ವಿದ್ಯಾರ್ಥಿಗೂ ಈ ನಿಟ್ಟಿನಲ್ಲಿ ಆಯಾ ವಿಷಯವಾರು ಶಿಕ್ಷಕರಿಂದ ತರಬೇತಿ ನೀಡಲಾಗಿತ್ತು ಎಂದರು.
‘ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಪರಾಮರ್ಶೆ ಮಾಡುವಂತೆ ಉತ್ತೇಜನ ನೀಡುವ ಮೂಲಕ, ಯಾವ ರೀತಿ ಹೆಚ್ಚು ಅಂಕ ಗಳಿಸಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಈ ಎಲ್ಲ ಕ್ರಮಗಳಿಂದಾಗಿ ಫಲಿತಾಂಶ ಸುಧಾರಣೆ ಕಂಡಿತು’ ಎಂದು ಹಿಂದಿನ ಡಿಡಿಪಿಐ ಚಂದ್ರಶೇಖರ್ ತಿಳಿಸಿದರು.
ಈ ಹಿಂದೆ ವಿದ್ಯಾರ್ಥಿಗಳು ಎರಡು, ಮೂರು, ನಾಲ್ಕು ಮತ್ತು ಐದು ಅಂಕ ಬರುವ ಪ್ರಶ್ನೆಗಳಿಗೆ ಬೇಕಾಬಿಟ್ಟಿಯಾಗಿ ಉತ್ತರ ನೀಡುತ್ತಿದ್ದರು. ಇದರಿಂದ ಅಂಕಗಳಲ್ಲಿ ವ್ಯತ್ಯಾಸ ಆಗುತ್ತಿತ್ತು. ಎಷ್ಟು ಅಂಕದ ಪ್ರಶ್ನೆಗೆ ಎಷ್ಟು ಉತ್ತರ ನೀಡಬೇಕೋ ಅಷ್ಟನ್ನೇ ಬರೆಯಲು ನಿರ್ದಿಷ್ಟವಾಗಿ ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು.
ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಹಾಗೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಹಾಗೂ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಪರಿಗಣಿಸಿ, ಆಯಾ ವಿಷಯವಾರು ತರಬೇತಿ ನೀಡುವ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನದಿಂದ ಫಲಿತಾಂಶದಲ್ಲಿ ಸುಧಾರಣೆ ಆಗಿದೆ.
2024- 25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 92.18 ಫಲಿತಾಂಶ ದಾಖಲಾಗಿದೆ. ಇದರಲ್ಲಿ ಎರಡನೇ ಪ್ರಯತ್ನದಲ್ಲಿ 3,645 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 1,555 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಮೂರನೇ ಪ್ರಯತ್ನದಲ್ಲಿ 2,093 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 381 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಉತ್ತಮ ಶ್ರೇಣಿ ಪಡೆಯಲು ಮುಖ್ಯಶಿಕ್ಷಕರು, ಶಿಕ್ಷಕರ ಶ್ರಮ; ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಮಾರ್ಗದರ್ಶನ ಮಹತ್ವದ್ದಾಗಿದೆ.-ಎಚ್.ಎಸ್. ಚಂದ್ರಶೇಖರ್, ಹಿಂದಿನ ಡಿಡಿಪಿಐ
ಜಿಲ್ಲೆಯಲ್ಲಿ ಮುಂದಿನ ವರ್ಷವೂ ಉತ್ತಮ ಫಲಿತಾಂಶ ಪಡೆಯಲು ಅಗತ್ಯವಿರುವ ಎಲ್ಲ ಕಾರ್ಯಕ್ರಮ ಮುಂದುವರಿಸಲಾಗುವುದು.-ಬಲರಾಮ್, ನೂತನ ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.