ADVERTISEMENT

ಅರಕಲಗೂಡು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಕಿರು ಪುಸ್ತಕ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:40 IST
Last Updated 21 ಜನವರಿ 2026, 5:40 IST
ಅರಕಲಗೂಡು ತಾಲ್ಲೂಕು ಬರಗೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಮಮಗಳವಾರ ನಡೆದ ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಮುದ್ರಣ ದಾನಿಗಳಾದ ಆಶಾ ವಿಜಯಕುಮಾರ್ ಅವರನ್ನು ಗೌರವಿಸಲಾಯಿತು. ಕೆ.ಪಿ. ನಾರಾಯಣ್, ರಂಗಸ್ವಾಮಿ, ಮಲ್ಲಮ್ಮ ಇದ್ದಾರೆ
ಅರಕಲಗೂಡು ತಾಲ್ಲೂಕು ಬರಗೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಮಮಗಳವಾರ ನಡೆದ ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಮುದ್ರಣ ದಾನಿಗಳಾದ ಆಶಾ ವಿಜಯಕುಮಾರ್ ಅವರನ್ನು ಗೌರವಿಸಲಾಯಿತು. ಕೆ.ಪಿ. ನಾರಾಯಣ್, ರಂಗಸ್ವಾಮಿ, ಮಲ್ಲಮ್ಮ ಇದ್ದಾರೆ   

ಅರಕಲಗೂಡು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಮಹತ್ವಾಕಾಂಕ್ಷೆ ಹೊಂದಿದ್ದು ಇದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಬಿಇಒ ಕೆ. ಪಿ. ನಾರಾಯಣ್ ತಿಳಿಸಿದರು.

ತಾಲ್ಲೂಕಿನ ಬರಗೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಹಾಯಕವಾಗುವಂತೆ ಸಿದ್ಧಪಡಿಸಿರುವ ಕಿರುಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕೈಗೊಂಡ ಹಲವು ಕ್ರಮಗಳಿಂದ ಎಂಟನೆ ಸ್ಥಾನದಲ್ಲಿದ್ದ ತಾಲ್ಲೂಕನ್ನು ಮೂರನೆ ಸ್ಥಾನಕ್ಕೆ ತರಲಾಗಿತ್ತು. ಈ ಬಾರಿ ಮೊದಲ ಸ್ಥಾನ ಪಡೆಯಬೇಕೆಂಬ ಗುರಿ ಹೊಂದಿದ್ದು ಈ ಹಿನ್ನೆಲೆಯಲ್ಲಿ ಕಿರುಪುಸ್ತಕ ಪ್ರಕಟಣೆ ಮಾಡಲಾಗಿದೆ. ಪುಸ್ತಕದಲ್ಲಿ ವಿಜ್ಞಾನದ ಚಿತ್ರಗಳು, ಗಣಿತದ ಸೂತ್ರ, ಸಮಾಜದ ಭೂಪಟಗಳಲ್ಲದೆ ಪರೀಕ್ಷಾಮಂಡಳಿ ರೂಪಿಸಿರುವ ನೀಲನಕ್ಷೆ ಆಧಾರಿತ ಪ್ರಶ್ನಪತ್ರಿಕೆಗಳನ್ನು ಮುದ್ರಿಸಲಾಗಿದೆ. 28 ಪುಟಗಳ ಈ ಕಿರು ಪಸ್ತಕವನ್ನು ವಿದ್ಯಾರ್ಥಿಗಳು ಓದಿ ಮನನ ಮಾಡಿಕೊಂಡಲ್ಲಿ ಪರೀಕ್ಷೆಯನ್ನು ಎದುರಿಸುವುದು ಸುಲಭವಾಗಲಿದೆ. ದಾನಿಗಳಾದ ಬೆಂಗಳೂರಿನ ವಿಜಯಕುಮಾರ್, ಆಶಾ ವಿಜಯಕುಮಾರ್ ಪುಸ್ತಕವನ್ನು ಮುದ್ರಿಸಿ ಪರೀಕ್ಷೆ ಬರೆಯಲಿರುವ 2,335 ವಿದ್ಯಾರ್ಥಿಗಳಿಗೆ ವಿತರಿಸಲು ನೆರವಾಗಿದ್ದು, ಇವರ ಸೇವೆಯನ್ನು ಇಲಾಖೆ ಸ್ಮರಿಸುತ್ತದೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದು ಉತ್ತಮ ಫಲಿತಾಂಶ ದಾಖಲಿಸಲು ಮುಂದಾಗಬೇಕು ಎಂದರು.

ದಾನಿಗಳಾದ ಆಶಾ, ವಿಜಯಕುಮಾರ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಬೆಂಗಳೂರಿನ ಉದ್ಯಮಿ ರಂಗಾರೆಡ್ಡಿ, ಉಪ ನಿರ್ದೇಕರ ಕಚೇರಿ ಶಿಕ್ಷಣಾಧಿಕಾರಿ ಮಲ್ಲಮ್ಮ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಿ. ಎ. ರಂಗಸ್ವಾಮಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಶಿಕ್ಷಣ ಸಂಯೋಜಕರಾದ ಯೋಗೀಶ್, ಶಿವಪ್ರಕಾಶ್ , ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಗಿರೀಶ್, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.