ADVERTISEMENT

ಈ ವರ್ಷದಿಂದ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜು ಆರಂಭ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:19 IST
Last Updated 10 ಮೇ 2025, 16:19 IST
ಶಾಸಕ ಕೆ.ಎಂ.ಶಿವಲಿಂಗೇಗೌಡ
ಶಾಸಕ ಕೆ.ಎಂ.ಶಿವಲಿಂಗೇಗೌಡ   

ಅರಸೀಕೆರೆ: ‘ತಾಲ್ಲೂಕಿನ ಜನತೆಯ ಕನಸಾಗಿದ್ದ ಸರ್ಕಾರಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳು ಪ್ರಸಕ್ತ ವರ್ಷದಿಂದಲೇ ಆರಂಭವಾಗಲಿದ್ದು, ಮೇ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಲಿದ್ದಾರೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳ ಕಟ್ಟಡಗಳು ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರಂಭವಾಗಲಿದೆ. ಉದ್ಘಾಟನೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಿಕ್ಷಣ ಸಚಿವರು ಸೇರಿದಂತೆ ಸಂಬಂಧಪಟ್ಟ ಸಚಿವ ಸಂಪುಟದ ಸದಸ್ಯರು ಅಂದು ಅರಸೀಕೆರೆಗೆ ಬರಲಿದ್ದಾರೆ’ ಎಂದರು.

‘240 ವಿದ್ಯಾರ್ಥಿಗಳ ಪ್ರವೇಶಾತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಅರ್ಜಿಗಳು ನಾಳೆಯಿಂದ ಕಚೇರಿಯಲ್ಲಿ ಲಭ್ಯವಾಗಲಿವೆ. ವಸತಿ ನಿಲಯಗಳ ವ್ಯವಸ್ಥೆ ಇದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು’ ಎಂದರು.

ADVERTISEMENT

‘ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಅಂಡ್‌ ಮಷಿನ್‌ ಲರ್ನಿಂಗ್‌, ಕಂಪ್ಯೂಟರ್‌ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌, ಎಲೆಕ್ರ್ಟಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌, ಇನ್ಫಾರ್ಮೇಷನ್‌ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌ ಕೋರ್ಸ್‌ಗಳು ಆರಂಭವಾಗಲಿವೆ’ ಎಂದು ತಿಳಿಸಿದರು.

‘ನಗರದ ಜೆ.ಎಂ.ಸಿ ನ್ಯಾಯಾಲಯ ಹಾಗೂ ತರಕಾರಿ ಮಾರುಕಟ್ಟೆಯನ್ನೂ ಇದೇ ಸಂದರ್ಭದಲ್ಲಿ ಉದ್ಘಾಟಿಸುವರು. ನೂತನ ಬಸ್‌ನಿಲ್ದಾಣ, ಫುಡ್‌ಕೋರ್ಟ್‌, ಒಳಾಂಗಣ ಕ್ರೀಡಾಂಗಣ, ಪತ್ರಕರ್ತರ ಸಂಘದ ಕಟ್ಟಡ, ಈಜುಗೊಳ ಸೇರಿದಂತೆ ಇನ್ನಿತರ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ನೆರವೇರಿಸುವರು’ ಎಂದು ವಿವರಿಸಿದರು.

‘ವಿದ್ಯುತ್‌ ಅಭಾವ ನೀಗಿಸಲು ತಾಲ್ಲೂಕಿನಲ್ಲಿ 250 ಎಕರೆಯಲ್ಲಿ ಸೌರ ವಿದ್ಯುತ್‌ ಘಟಕವನ್ನು ಸುಮಾರು ₹250 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಅದರ ಶಂಕುಸ್ಥಾಪನೆ ನೆರವೇರಿಸಿವರು. ಕ್ಷೇತ್ರಕ್ಕೆ 82 ಮೆಗಾವ್ಯಾಟ್‌ ವಿದ್ಯುತ್‌ ಬೇಕಾಗಿದ್ದು, ಸೌರಶಕ್ತಿಯಿಂದ 58 ಮೆಗವ್ಯಾಟ್‌ ವಿದ್ಯುತ್‌ ಲಭ್ಯವಾಗಲಿದೆ. ಶತಮಾನದಲ್ಲಿ ಕ್ಷೇತ್ರದ ಜನತೆಗೆ ವಿದ್ಯುತ್ ಅಭಾವ ತಲೆದೋರುವುದಿಲ್ಲ. ರೈತರಿಗೆ ಪ್ರಯೋಜನ ಆಗಲಿದೆ’ ಎಂದರು.

‘ಎಂ.ಇ.ಎಸ್‌.ಎಸ್‌. ಸೆಂಟರ್‌ಗಳನ್ನು ಈಗಾಗಲೇ ಕಣಕಟ್ಟೆ ಹಾಗೂ ಸಾತನಕೆರೆ ಗ್ರಾಮಗಳಲ್ಲಿ ಪ್ರಾರಂಭವಾಗಿದ್ದು, ಇನ್ನು 3 ಉಪಕೇಂದ್ರಗಳನ್ನು ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಶಂಕುಸ್ಥಾಪನೆ ನೆರವೇರಲಿದೆ. ರಾಜಕೀಯ ಜೀವನದಲ್ಲಿ ಕ್ಷೇತ್ರದ ಜನತೆಯ ಅನೂಕೂಲತೆ ಕಲ್ಪಿಸಲು ಸದಾ ಬದ್ಧವಾಗಿದ್ದೆನೆ’ ಎಂದರು. 

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.