ADVERTISEMENT

ಮುಂದಿನ ವರ್ಷ ರಾಜ್ಯ ಶಿಕ್ಷಣ ನೀತಿ ಜಾರಿ: ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 13:19 IST
Last Updated 27 ಸೆಪ್ಟೆಂಬರ್ 2023, 13:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅರಸೀಕೆರೆ: ರಾಜ್ಯದ ಹಲವು ಕಡೆಗಳಲ್ಲಿ ಎನ್‍ಇಪಿ ಜಾರಿ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಅನೇಕ ಕಡೆಗಳಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ರಾಜ್ಯದಲ್ಲಿ ಎನ್‍ಇಪಿಗೆ ಪೂರಕ ವಾತಾವರಣ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಹೇಳಿದರು.

‍ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 2021 ರಲ್ಲಿಎನ್‍ಇಪಿ ಜಾರಿಗೆ ಮಾಡಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೇ ಜಾರಿ ಮಾಡಲಾಗಿದೆ. ಸಾಕಷ್ಟು ನ್ಯೂನತೆ ಇರುವುದರಿಂದ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದರು.

ADVERTISEMENT

ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುವುದಾಗಿ ಬಜೆಟ್‌ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದರಂತೆ ಮುಂದಿನ ವರ್ಷದಿಂದ ಎನ್‍ಇಪಿ ರದ್ದುಪಡಿಸಿ, ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲಾಗುವುದು ಎಂದು ಹೇಳಿದರು.

ಎನ್‍ಇಪಿ ವಿಷಯಗಳೇ ಬೇರೆ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿಷಯಗಳೇ ಬೇರೆ. ಹೀಗಾಗಿ ಹೆಚ್ಚು ಮಕ್ಕಳಿಗೆ ಇದರಿಂದ ತೊಂದರೆಯಾಗಿದೆ. ಅದರಲ್ಲೂ ಗ್ರಾಮೀಣ ಮಕ್ಕಳಿಗೆ ಅನೇಕ ರೀತಿಯ ಅನಾನುಕೂಲ ಆಗಿದೆ. ಎಲ್ಲರಿಗೂ ಅನುಕೂಲ ಆಗುವ, ಎಲ್ಲ ವರ್ಗ, ಜಾತಿಗಳನ್ನು ಒಳಗೊಂಡ ಶಿಕ್ಷಣ ನೀತಿ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅರಸೀಕೆರೆ ಎಂಜಿನಿಯರಿಂಗ್ ಕಾಲೇಜು ಕಾಮಗಾರಿ 4 ವರ್ಷದಿಂದ ಮುಗಿದಿಲ್ಲ, ಆದಷ್ಟು ಶೀಘ್ರ ಪೂರ್ಣವಾಗಬೇಕು ಎಂಬುದು ನಮ್ಮ ಉದ್ದೇಶ. ಸ್ಥಳೀಯ ಶಾಸಕರು ನನ್ನ ಗಮನಕ್ಕೆ ತಂದ ನಂತರ ಶೀಘ್ರ ಮುಗಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ವಿದ್ಯಾರ್ಥಿ ವೇತನ ವಿಳಂಬ ಆಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿ ವೇತನ ಮೊದಲಿನಂತೆ ಪಾವತಿ ಆಗುತ್ತಿದೆ. ಕೇಂದ್ರ ಸರ್ಕಾರ ಡಿಬಿಟಿ ಪದ್ಧತಿ ಮಾಡಿದೆ. ಶೇ 60 ಕೇಂದ್ರ, ಶೇ 40 ರಾಜ್ಯದ್ದು. ಹೀಗಾಗಿ ಕೆಲ ಕಾಲೇಜುಗಳಲ್ಲಿ ಗೊಂದಲ ಆಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುವಳಿದ ವರ್ಗಗಳ ವಿದ್ಯಾರ್ಥಿಗಳ ಪ್ರವೇಶಕ್ಕೆ ತೊಂದರೆ ಕೊಡಬಾರದು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

ಕೋವಿಡ್‌–19 ನಂತರ ಪರೀಕ್ಷಾ ವೇಳಾಪಟ್ಟಿ ಏರುಪೇರಾಗಿದೆ. ಅತಿಥಿ ಉಪನ್ಯಾಸಕರ ನೇಮಕ ಹಾಗೂ ವರ್ಗಾವಣೆಯಿಂದ ಸಮಸ್ಯೆಯಾಗುತ್ತಿದೆ. ಇಡೀ ರಾಜ್ಯದಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಸಮಾನಾಂತರವಾಗಿ ತರಬೇಕು ಎಂದು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ಎರಡೂವರೆ ಲಕ್ಷ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್ ಮುಖಂಡರಾದ ಪಟೇಲ್ ಶಿವಪ್ಪ, ಬಿಳಿ ಚೌಡಯ್ಯ, ಗಂಜಿಗೆರೆ ಚಂದ್ರಶೇಖರ್, ಕೃಷ್ಣ, ಗಿರೀಶ್, ಧರ್ಮೇಶ್, ನಗರಸಭೆ ಸದಸ್ಯ ವೆಂಕಟಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.