ADVERTISEMENT

ಕಲ್ಲು ಗಣಿಗಾರಿಕೆಯಿಂದ ತೊಂದರೆ: ಆರೋಪ

ಬೇಲೂರು ತಹಶೀಲ್ದಾರ್ ಶ್ರೀಧರ್ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:39 IST
Last Updated 18 ಜನವರಿ 2026, 4:39 IST
ಬೇಲೂರು ಪಟ್ಟಣ ಸಮೀಪದ ಪ್ರಸಾದಿಹಳ್ಳಿ ರಸ್ತೆಯ ಬೇಲೂರು ಸ್ಟೋನ್ ಕ್ರಶರ್‌ಗೆ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಗ್ರಾಮಸ್ಥರ ಜೊತೆ ಮಾತನಾಡಿದರು
ಬೇಲೂರು ಪಟ್ಟಣ ಸಮೀಪದ ಪ್ರಸಾದಿಹಳ್ಳಿ ರಸ್ತೆಯ ಬೇಲೂರು ಸ್ಟೋನ್ ಕ್ರಶರ್‌ಗೆ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಗ್ರಾಮಸ್ಥರ ಜೊತೆ ಮಾತನಾಡಿದರು   

ಬೇಲೂರು: ಪಟ್ಟಣ ಸಮೀಪದ ಪ್ರಸಾದಿಹಳ್ಳಿ ರಸ್ತೆಯ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಶನಿವಾರ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಬೇಲೂರು ಬೇಲೂರು ಕ್ರಶರ್’ ದಾಖಲಾತಿಗಳನ್ನು ಪಡೆದು, ಪ್ರತಿದಿನ ಎಷ್ಟು ಲೋಡ್ ಹೊರ ಹೋಗುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸಿ, ಸಿ.ಸಿ.ಕ್ಯಾಮರಾ ವಶಪಡಿಸಿದರು. ಪರಿಶೀಲನೆ ಪೂರ್ಣ ಮುಗಿಯುವವರೆಗೆ ಎರಡರಿಂದ ಮೂರು ದಿನಗಳವರೆಗೆ ಕ್ರಶರ್ ಬಂದ್ ಮಾಡುವಂತೆ ಕ್ರಶರ್ ವ್ಯವಸ್ಥಾಪಕರಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್‌, ‘ನಿಯಮ‌ ಮೀರಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕ್ರಶರ್‌ನಿಂದ ಬರುವ ದೂಳಿನಿಂದ ಜನರಿಗೆ ಸಮಸ್ಯೆ ಆಗುತ್ತಿರುವುದು. ನೆಲದಲ್ಲಿ ಅಳವಾಗಿ ಕಲ್ಲು ಸಿಡಿಸಿರುವುದು ಕಂಡು ಬರುತ್ತಿದ್ದು, ಗಣಿಗಾರಿಕೆ ಇಲಾಖೆಯವರು ಯಾವ ರೀತಿ ಅನುಮತಿ ನೀಡಿದ್ದಾರೆ, ಕ್ರಶರ್ ಮಾಲೀಕರು ಯಾವ ನಿಯಮ ಮೀರಿದ್ದಾರೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

ಸನ್ಯಾಸಿಹಳ್ಳಿ ನರೇಂದ್ರ ಮಾತನಾಡಿ, ‘ಅಕ್ಕಪಕ್ಕದ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಭೂಮಿಯ ತಳಭಾಗದಲ್ಲಿ 100 ಅಡಿಗಿಂತಲೂ ಹೆಚ್ಚಿನ ಅಳವಾದ ಹಳ್ಳಗಳನ್ನು ತೋಡಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಮಾರುತಿ ನಗರ, ಹೊಸ ಹಾಗೂ ಹಳೇ ಉತ್ಪಾತನಹಳ್ಳಿ, ಸನ್ಯಾಸಿಹಳ್ಳಿ, ಹಾಗೂ ಸುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಕಟ್ಟಡಗಳು ಬಿರುಕು ಬಿಟ್ಟಿವೆ, ರಿಗ್ ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ಭೂಕಂಪವಾದ ಅನುಭವ ಉಟಾಗುತ್ತಿದೆ. ಈ ಬಗ್ಗೆ ಕ್ರಶರ್‌ನವರಿಗೆ ಸಾಕಷ್ಟು ಭಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

ಮಾರುತಿ ನಗರದ ಮಂಜೇಗೌಡ ಮಾತನಾಡಿ, ‘ಕಟ್ಟಡಗಳಿಗೆ ಹಾನಿ ಆಗುತ್ತಿರುವ ಜೊತೆಗೆ ಪ್ರಾಣಹಾನಿಯಾಗುವ ಸಾಧ್ಯತೆಗಳಿವೆ. ಗಣಿಗಾರಿಕೆಯ ದೂಳಿನಿಂದ ಸುತ್ತಮುತ್ತಲಿನ ಜಮೀನುಗಳ ಜೋಳ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗುತ್ತಿವೆ. ತಾಲ್ಲೂಕು ಆಡಳಿತ ಹಾಗೂ ಗಣಿ ಮತ್ತು ಭೂವಿಜ್ಙಾನ ಇಲಾಖೆಯವರು ಗಣಿಗಾರಿಕೆಯನ್ನು ನಿಲ್ಲಿಸಿ ಗ್ರಾಮಸ್ಥರ ಹಿತ ಕಾಪಾಡಬೇಕು’ ಎಂದು ಒತ್ತಾಯಿಸಿದರು.

ರಾಜಸ್ವ ನಿರೀಕ್ಷಕ ಉದೀತ್, ಗ್ರಾಮ ಲೆಕ್ಕಾಧಿಕಾರಿ ಹನುಮಂತು, ಗ್ರಾಮಸ್ಥರಾದ ಗಿರೀಶ್, ಧರ್ಮೆಗೌಡ, ಪುಟ್ಟಸ್ವಾಮಿಗೌಡ, ಹೇಮಂತ್, ಕಿರಣ್, ಕುಮಾರ್, ಮೋಹನ್, ದಯಾನಂದ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.