
ಅರಸೀಕೆರೆ: ನಗರದ ಹಾಸನ ರಸ್ತೆ ಸೇರಿದಂತೆ ಎಲ್ಲೆಡೆ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಾಗರಿಕರು ಜೀವ ಭಯದಲ್ಲಿ ರಸ್ತೆಗೆ ಇಳಿಯುವಂತಾಗಿದೆ. ಸಾರ್ವಜನಿಕರು ಹಾಗೂ ದಾರಿಹೋಕರು ರಸ್ತೆಗಳಲ್ಲಿ ಓಡಾಡುವುದಕ್ಕೂ ಭಯ ಪಡುವಂತಾಗಿದೆ.
ನಗರದ ಎಲ್ಲ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಹಾಗೂ ಬೈಕ್ ಸವಾರರನ್ನು ಏಕಾಏಕಿ ನಾಯಿಗಳು ಬೆನ್ನಟ್ಟುತ್ತಿದ್ದು, ಸಾರ್ವಜನಿಕರಲ್ಲಿ ಆತಂಕಪಡುವಂತಾಗಿದೆ.
ಶಾಲೆಗಳ ಆವರಣ, ಮಟನ್ ಮಾರ್ಕೆಟ್, ದೇವಸ್ಥಾನಗಳ ಆವರಣಗಳಲ್ಲಿ ನಾಯಿಗಳು ಜಮಾಯಿಸುತ್ತಿವೆ. ಜೇನುಕಲ್ಲು ನಗರ, ಹಾಸನ ರಸ್ತೆಯಲ್ಲಂತೂ ವಿಪರೀತವಾಗಿ ನಾಯಿಗಳು ಕಾಣಿಸಿಕೊಳ್ಳುತ್ತಿದ್ದು, ನಗರಸಭೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ತೆರಳುವ ನಾಗರಿಕರು ಹಾಗೂ ವಯೋವೃದ್ಧರಿಗೆ ಬೀದಿನಾಯಿಗಳಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ. ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವ ನಿಟ್ಟಿನಲ್ಲಿ ನಗರಸಭೆ ಕ್ರಮಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಸೂಕ್ತ ಆಶ್ರಯ ಕೇಂದ್ರಗಳಿಗೆ ಅಥವಾ ಬೇರೆ ನಿರ್ದಿಷ್ಟ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಇದರ ಜೊತೆಗೆ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಲವು ಸಂಘ–ಸಂಸ್ಥೆಗಳು ನಗರಸಭೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ನಾಯಿಗಳ ಸಮಸ್ಯೆ ಹಾಗೂ ಹಲವರಿಗೆ ಕಚ್ಚಿರುವ ಬಗ್ಗೆ ದೂರುಗಳು ಬಂದಿದ್ದು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದುಕೃಷ್ಣಮೂರ್ತಿ ನಗರಸಭೆ ಪೌರಾಯುಕ್ತ
ಹಾಸನ ರಸ್ತೆಯ ಸುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ನಗರ ವ್ಯಾಪ್ತಿಯ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಬೇಕುಶಿವನ್ ರಾಜ್ ಬಿಜೆಪಿ ಮುಖಂಡ
ಪತ್ರಿಕೆ ವಿತರಣೆಗೂ ಆತಂಕ
‘ಮುಂಜಾನೆ ಪತ್ರಿಕೆ ವಿತರಿಸುವ ವಿತರಕರಿಗೆ ನಾಯಿಗಳು ಕಚ್ಚಿರುವ ನಿದರ್ಶನಗಳು ಇವೆ. ಮುಸ್ಸಂಜೆ ವೇಳೆಯಲ್ಲಿ ನಾಯಿಗಳು ರಸ್ತೆಗಳಲ್ಲಿ ಹಿಂಡು ಹಿಂಡಾಗಿ ಮಲಗಿಕೊಳ್ಳುತ್ತಿದ್ದು ಸೈಕಲ್ ಅಥವಾ ಬೈಕ್ ಶಬ್ದ ಕೇಳಿದ ತಕ್ಷಣವೇ ಹುಡುಗರನ್ನು ಬೆನ್ನಟ್ಟುತ್ತಿವೆ. ನಾಯಿಗಳಿಗೆ ಭಯಬಿದ್ದು ಹುಡುಗರು ಪತ್ರಿಕೆ ಹಾಕುವುದನ್ನೇ ಬಿಟ್ಟಿದ್ದಾರೆ’ ಎನ್ನುತ್ತಾರೆ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ. ‘ನಾಗರಿಕರು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಡುವುದರಿಂದ ನಾಯಿಗಳು ಹಿಂಡು ಹಿಂಡಾಗಿ ಸೇರುತ್ತಿವೆ. ತ್ಯಾಜ್ಯಗಳನ್ನು ಕಸದ ವಾಹನಗಳಲ್ಲಿ ಹಾಕಬೇಕು. ಹೋಟೆಲ್‌ನ ಆಹಾರ ತಿಂಡಿ ತಿನಿಸುಗಳ ಪ್ಯಾಕೆಟ್‌ಗಳನ್ನು ಬಿಸಾಕುವುದರಿಂದ ನಾಯಿಗಳು ತಿನ್ನುತ್ತಿರುತ್ತವೆ. ದಾರಿಹೋಕರು ಸಂಚರಿಸಿದಾಗ ಅವುಗಳು ಆತಂಕಗೊಂಡು ಕಚ್ಚುತ್ತವೆ. ರಸ್ತೆಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.