ADVERTISEMENT

ಬೀದಿನಾಯಿ, ಮಂಗಗಳ ಉಪಟಳ

ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಸಂಚರಿಸಲು ಹಿಂದೇಟು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 2:46 IST
Last Updated 2 ಆಗಸ್ಟ್ 2021, 2:46 IST
ಆಲೂರು ಪಟ್ಟಣದ ರಸ್ತೆಯಲ್ಲಿ ಹಿಂಡು ಹಿಂಡಾಗಿ ತಿರುಗುವ ಬೀದಿನಾಯಿಗಳು
ಆಲೂರು ಪಟ್ಟಣದ ರಸ್ತೆಯಲ್ಲಿ ಹಿಂಡು ಹಿಂಡಾಗಿ ತಿರುಗುವ ಬೀದಿನಾಯಿಗಳು   

ಆಲೂರು: ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಬೀದಿ ನಾಯಿಗಳು ಹಾಗೂ ಮಂಗಗಳು ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ.

ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಬೀದಿ ನಾಯಿ ಮತ್ತು ಮಂಗಗಳ ಕಾಟ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇವುಗಳ ಕಾಟದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.

ಮನೆ ಕಿಟಕಿಯನ್ನು ತೆರೆದಿದ್ದರೆ ಯಾವುದೇ ಭಯವಿಲ್ಲದೆ ಮಂಗಗಳು ಮನೆಯೊಳಗೆ ಪ್ರವೇಶ ಮಾಡಿ, ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ನಷ್ಟ ಉಂಟು ಮಾಡುತ್ತಿವೆ. ಒಣಗಲು ಹಾಕಿದ್ದ ಬಟ್ಟೆಗಳನ್ನು ಹರಿದು ಹಾಕುವುದು, ತಲೆ ಮೇಲೆ ಹೊದ್ದುಕೊಂಡು ಮರ ಏರುವುದು, ಬಟ್ಟೆಗಳನ್ನು ಹೊತ್ತುಕೊಂಡು ಹೋಗಿ ಎಲ್ಲೆಂದರಲ್ಲಿ ಬಿಸಾಡುತ್ತಿವೆ.

ADVERTISEMENT

ಅಂಗಳದಲ್ಲಿ ಒಣ ಹಾಕಿದ್ದ ಹಪ್ಪಳ ಸಂಡಿಗೆಗಳನ್ನು ತಿನ್ನುವುದರ
ಜೊತೆಗೆ, ಚೆಲ್ಲಾಡಿ ಪುಡಿ ಮಾಡುತ್ತಿವೆ. ತೆಂಗಿನ
ಮರವೇರಿ ಎಳನೀರು, ತೆಂಗಿನ ಕಾಯಿಗಳನ್ನು ಕಿತ್ತು ಹಾಕುವುದು ನಿತ್ಯದ ಕಾಯಕವಾಗಿದೆ.ಓಡಿಸಲು ಹೋದವರ ಮೇಲೆ ಎರಗುವುದು ಸಾಮಾನ್ಯವಾಗಿದೆ.

ಪಟ್ಟಣದ ಮುಖ್ಯ ರಸ್ತೆಯಲ್ಲಿಯೂ ಭಯವಿಲ್ಲದೆ ಎಲ್ಲೆಂದರಲ್ಲಿ ಓಡಾಡುವ ಮೂಲಕ ಕೇಬಲ್‌ಗಳನ್ನು ತುಂಡರಿಸುತ್ತಿವೆ. ಕಿಟಕಿ ಸಂದಿಯಲ್ಲಿ ನುಗ್ಗಿ ಮನೆಯೊಳಗಿದ್ದ ಹಣ್ಣು, ತಿಂಡಿ ತಿನಿಸುಗಳನ್ನು ತಿಂದು ಹಾಕುತ್ತಿವೆ. ಅಂಗಡಿಗಳಿಗೆ ಪ್ರವೇಶ ಮಾಡಿ ಹಣ್ಣು ಹಂಪಲನ್ನು ಕಿತ್ತು ಬಿಸಾಡುವ ಮೂಲಕ ಜನರಿಗೆ ಪುಕ್ಕಟ್ಟೆ ಮನರಂಜನೆ ನೀಡುತ್ತಿವೆ.

ಕಚೇರಿಗೆ ನುಗ್ಗುವ ಮಂಗಗಳು ದಾಖಲಾತಿಗಳನ್ನು ನಾಶ ಮಾಡುತ್ತಿವೆ. ಜನಸಾಮಾನ್ಯರು ಕೊಂಡು ಹೋಗುವ ಸರಕು ಸಾಮಾನುಗಳನ್ನು ಎಗ್ಗಿಲ್ಲದೆ ಕಿತ್ತುಕೊಂಡು ಹಾಳು ಮಾಡುತ್ತಿವೆ. ಹೀಗಾಗಿ ಮಕ್ಕಳು, ಮಹಿಳೆಯರು, ಹಿರಿಯರು ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ.

ಬೀದಿನಾಯಿಗಳು ಹಿಂಡು ಹಿಂಡಾಗಿ ತಿರುಗಾಡುತ್ತಿವೆ. ಮಕ್ಕಳ ಕೈಯಲ್ಲಿರುವ ತಿನಿಸು ಕಸಿದುಕೊಳ್ಳುವ ಯತ್ನದಲ್ಲಿ ಹಲವು ಬಾರಿ ಕಚ್ಚಿ ಗಾಯಗೊಳಿಸಿವೆ. ರಾತ್ರಿ ವೇಳೆ ಜನಸಾಮಾನ್ಯರು ನಿದ್ರೆ ಮಾಡಲು ಬಿಡುವುದಿಲ್ಲ. ಬೀದಿಗಳಲ್ಲಿ ಬೊಗಳುತ್ತಾ ತಿರುಗಾಡುತ್ತಿವೆ. ಬೆದರಿಸಿ ಓಡಿಸಲು ಹೋದವರ ಮೇಲೆ ಎರಗಿ ಬೀಳುತ್ತಿವೆ. ಮಹಿಳೆಯರು, ಮಕ್ಕಳು ತಿರುಗಾಡಲು ಭಯ ಪಡುತ್ತಿದ್ದಾರೆ.

ಮರಸು, ಮರಸುಕೊಪ್ಪಲು, ಮರಸು ಕಾಲೊನಿ ಗ್ರಾಮದಲ್ಲಿ ಬೀದಿ ನಾಯಿಗಳುವಿಪರೀತವಾಗಿವೆ. ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಕಾರಣ ವಾಹನಸವಾರರು ನಿಯಂತ್ರಣ ಕಳೆದುಕೊಂಡು ಬಿದ್ದಿರುವ ಘಟನೆಗಳು ನಡೆದಿವೆ.

ನಗರದ ಕೋಳಿ, ಮಾಂಸದ ಅಂಗಡಿಗಳ ಬಳಿ ಹೆಚ್ಚು ಸಂಖ್ಯೆಯಲ್ಲಿ ಬೀದಿನಾಯಿಗಳು ಕಾಣಿಸಿ ಕೊಳ್ಳುತ್ತಿವೆ. ಕೋಳಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅವುಗಳನ್ನು ತಿನ್ನಲು ಹಿಂಡು ಹಿಂಡಾಗಿ ಬರುತ್ತವೆ.

‘ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಿಸಬಹುದು.
ಆದರೆ, ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಶ್ವಾನಗಳ ಉಪಟಳ ಹೆಚ್ಚಾಗಿದೆ’ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಅರಣ್ಯ ಇಲಾಖೆ ಸಹಕಾರ ದೊಂದಿಗೆ ಮಂಗಗಳು, ಬೀದಿ ನಾಯಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.