ADVERTISEMENT

ಸಕಲೇಶಪುರ|ಅಮವಾಸ್ಯೆ, ರಾಹುಕಾಲ ಕೆಟ್ಟದ್ದೆಂಬ ನಂಬಿಕೆ ಸುಳ್ಳು: ಮಾಜಿ ಶಾಸಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:03 IST
Last Updated 15 ಜನವರಿ 2026, 6:03 IST
ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಸೋಮವಾರ ನಡೆದ ಮಂತ್ರ ಮಾಂಗಲ್ಯದಲ್ಲಿ ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್ ಹಾಗೂ ಇತರರು ವಧುವರನನ್ನು ಆಶೀರ್ವದಿಸಿದರು
ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಸೋಮವಾರ ನಡೆದ ಮಂತ್ರ ಮಾಂಗಲ್ಯದಲ್ಲಿ ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್ ಹಾಗೂ ಇತರರು ವಧುವರನನ್ನು ಆಶೀರ್ವದಿಸಿದರು   

ಸಕಲೇಶಪುರ: ‘ಮಂಗಳವಾರ, ಅಮವಾಸ್ಯೆ, ರಾಹುಕಾಲ ಕೆಟ್ಟದ್ದು ಎಂಬ ನಂಬಿಕೆ ಶುದ್ಧ ಸುಳ್ಳು, ಇಂತಹ ಕಾಲದಲ್ಲಿಯೇ ನಾನು ವಿವಾಹವಾಗಿ ಸುಂದರ ಬದುಕು ನಡೆಸುತ್ತಿದ್ದೇನೆ’ ಎಂದು ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್ ಹೇಳಿದರು.

ತಾಲ್ಲೂಕಿನ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ (ಬೆಳ್ಳೆಕೆರೆ ಹಳ್ಳಿ ಥಿಯೇಟರ್‌) ಸೋಮವಾರ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಎ.ಮಂಜುನಾಥ್ ಮತ್ತು ಮೋನಿಕಾ ಅವರ ಮಂತ್ರಮಾಂಗಲ್ಯ ವಿವಾಹದಲ್ಲಿ ಭಾಗವಹಿಸಿ ಮಾತನಾಡಿದರು.

ಆಡಂಬರದ ವಿವಾಹಗಳಲ್ಲಿ ಯಾವುದೇ ಅರ್ಥವಿಲ್ಲ. ಎಷ್ಟೋ ಕುಟುಂಬಗಳು ‘ನಮ್ಮ ಮಗ, ಮಗಳ ಮದುವೆಯನ್ನು ಹೀಗೆಯೇ ಅದ್ದೂರಿಯಾಗಿ ಮಾಡಬೇಕು, ಇಲ್ಲದೆ ಹೋದರೆ ಸಮಾಜ ಏನೆಂದುಕೊಳ್ಳುತ್ತದೆಯೋ, ಸಂಬಂಧಿಕರ ಮುಂದೆ ನಾವೂ ಏನೂ ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಬೇಕು ಎಂಬ ಹಠದಿಂದ ಆಸ್ತಿ ಇದ್ದವರು ಆಸ್ತಿ ಮಾರಿ, ಇಲ್ಲದೆ ಇದ್ದವರು ಮೈತುಂಬಾ ಸಾಲ ಮಾಡಿ ವಿವಾಹ ಮಾಡುತ್ತಿರುವುದು ಸಾಮಾನ್ಯವಾಗಿದೆ. ಮದುವೆಗಾಗಿ ಮಾಡಿದ ಸಾಲವನ್ನು ಮಗ, ಮೊಮ್ಮಕ್ಕಳು ತೀರಿಸಿದ ಉದಾಹರಣೆ ಈ ಸಮಾಜದಲ್ಲಿ ಇದೆ ಎಂದರು.

ADVERTISEMENT

ಮನೆ ಮಾರಿಕೊಂಡು ಮದುವೆ ಮಾಡುವುದು ಬೇಡ, ಗಂಡು ಹೆಣ್ಣು ಹಾಗೂ ಅವರ ಅಪ್ಪ ಅಮ್ಮ ಒಪ್ಪಿದರೆ ಸಾಕು, ಕುವೆಂಪು ಅವರ ಮಂತ್ರ ಮಾಂಗಲ್ಯದ ಅಡಿ ಸರಳವಾಗಿ ವಿವಾಹ ಆಗುವುದೇ ನಿಜವಾದ ಮದುವೆ. ಇಂತಹ ವಿವಾಹಗಳಿಗೆ ಎಲ್ಲರೂ ಹೆಚ್ಚು ಪ್ರೋತ್ಸಾಹ ನೀಡಬೇಕು. ಒಂದು ದಿನದ ಮದುವೆಗೆ ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಡೀ ಬದುಕು ಪೂರ್ತಿ ಸಾಲಗಾರರಾಗಬೇಡಿ. ಕಾನೂನಿನ ಭದ್ರತೆಗಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳಿ ಎಂದರು.

ಮಣ್ಣಿಗೆ ಬೀಜ ನೆಡುವಾಗ ವಾರ, ಗಳಿಗೆ ಕಾಲವನ್ನು ನೋಡಿ ನೆಡುತ್ತೇವೆಯೇ.? ಯಾವ ಸಮಯದಲ್ಲಿ ನೆಟ್ಟು ನೀರು ಹಾಕಿದರೂ ಮೊಳಕೆಯೊಡೆದು ಗಿಡವಾಗಿ ಫಲ ನೀಡುತ್ತದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದರೂ ಜನರ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಮೌಡ್ಯಗಳನ್ನು ಅಳಿಸಲು ಸಾಧ್ಯವಾಗದೆ ಇರುವುದು ದೊಡ್ಡ ದುರಂತ ಎಂದು ಆತಂಕ ವ್ಯಕ್ತಪಡಿಸಿದರು.

ಆಕಾಶ, ಭೂಮಿ, ಗಾಳಿ, ನೀರು, ಬೆಂಕಿ ಈ ಪಂಚಭೂತಗಳೇ ನಿಜವಾದ ದೇವರು. ಅತಿಯಾಸೆಯ ಬೆನ್ನು ಹತ್ತಿರುವ ನಾವು, ಇಂದು ಕಣ್ಣಿಗೆ ಕಾಣುವ ಭೂಮಿ, ನೀರು, ಗಾಳಿ ಇಂತಹ ದೇವರನ್ನು ಕಲುಷಿತಗೊಳಿಸುತ್ತಾ ನಮ್ಮ ನಾಶವನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ ಎಂದ ಅವರು ಮೌಢ್ಯಗಳು ಎಂಬ ಅಜ್ಞಾನದಿಂದ ವಿಜ್ಞಾನದ ಜ್ಞಾನದೆಡೆಗೆ ಬದುಕು ರೂಪಿಸಿಕೊಳ್ಳಬೇಕು ಎಂದರು.

ರಂಗಕರ್ಮಿ ಪ್ರಸಾದ್ ರಕ್ಷಿದಿ ವಧುವರನಿಗೆ ಮಂತ್ರ ಮಾಂಗಲ್ಯದ ಪ್ರಮಾಣ ವಚನ ಬೋಧಿಸಿ ಮದುವೆ ಮಾಡಿಸಿದರು. ಪತ್ರಕರ್ತ ಅರುಣ್ ರಕ್ಷಿದಿ, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಡಿ. ರಾಜ್‌ಕುಮಾರ್, ಜಯಕರ್ನಾಟಕ ಸಂಘದ ಸತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.