ADVERTISEMENT

ನಿಷ್ಪಕ್ಷಪಾತ ಚುನಾವಣೆಗೆ ಕ್ರಮ ವಹಿಸಿ

ಭಯದ ವಾತಾವರಣ ಸೃಷ್ಟಿ; ಜೆಡಿಎಸ್‌ ವಿರುದ್ಧ ಜಿಲ್ಲಾಡಳಿತಕ್ಕೆ ಕಾಂಗ್ರೆಸ್‌ ಮುಖಂಡರ ದೂರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 16:04 IST
Last Updated 2 ಡಿಸೆಂಬರ್ 2021, 16:04 IST
ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ಮುಖಂಡರು ಬಂದ ದೃಶ್ಯ. ಸಂಸದ ಡಿ.ಕೆ.ಸುರೇಶ್‌, ಆರ್.ಧ್ರುವನಾರಾಯಣ, ಎಂ.ಎ.ಗೋಪಾಲಸ್ವಾಮಿ, ಜವರೇಗೌಡ, ಎಂ.ಶಂಕರ್‌, ಎಚ್.ಕೆ.ಮಹೇಶ್ ಇದ್ದಾರೆ
ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ಮುಖಂಡರು ಬಂದ ದೃಶ್ಯ. ಸಂಸದ ಡಿ.ಕೆ.ಸುರೇಶ್‌, ಆರ್.ಧ್ರುವನಾರಾಯಣ, ಎಂ.ಎ.ಗೋಪಾಲಸ್ವಾಮಿ, ಜವರೇಗೌಡ, ಎಂ.ಶಂಕರ್‌, ಎಚ್.ಕೆ.ಮಹೇಶ್ ಇದ್ದಾರೆ   

ಹಾಸನ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಭಯದ ವಾತಾವರಣ ನಿರ್ಮಾಣ ವಾಗಿದ್ದು, ನ್ಯಾಯ ಸಮ್ಮತ ಹಾಗೂ ಮುಕ್ತ ಮತದಾನ ನಡೆಯಲು ಅನುವುಮಾಡಿಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ಗುರುವಾರ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ
ಮುಖಂಡರು ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿ ರೇಖಾ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ‘ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ಭಯದ ವಾತಾವರಣ ಸೃಷ್ಟಿಸಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಮಿಷ ತೋರುವ ಮೂಲಕ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅದನ್ನ ಮೊಬೈಲ್‌ನಲ್ಲಿ ಫೋಟೋ ತರಬೇಕೆಂದು ಹೆದರಿಸಿ ದ್ದಾರೆ.ಇದರಿಂದ ಅನೇಕ ಅಕ್ರಮ ನಡೆಯುವ ಸಾಧ್ಯತೆ ಇದ್ದು, ನಿಷ್ಪಕ್ಷಪಾತ ಚುನಾವಣೆ ನಡೆಸಲುಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸರ್ಕಾರಿ ವಾಹನ ಹಿಂಪಡೆದಿಲ್ಲ. ಸಂಸದರ ಕಚೇರಿಯನ್ನು ಜೆಡಿಎಸ್ ಚುನಾವಣಾ ಕಾರ್ಯಚಟುವಟಿಕೆ ಬಳಸಿಕೊಳ್ಳ ಲಾಗುತ್ತಿದೆ. ಇವು ನೀತಿಸಂಹಿತೆಯ ನೇರ ಉಲ್ಲಂಘನೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಬೆಂಬಲಿತ ಮತದಾರರು ಜೆಡಿಎಸ್ ಕಿರುಕುಳದ ಬಗ್ಗೆ ಬಳಿ ದೂರುಹೇಳಿಕೊಂಡಿದ್ದಾರೆ. ಹೀಗಾಗಿ ಮುಕ್ತ ಮತದಾನ ನಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ,ಮೊಬೈಲ್ ನಿರ್ಬಂಧಿಸುವಂತೆ ಒತ್ತಾಯಿಸಿದ್ದೇವೆ. ನೀತಿ ಸಂಹಿತೆ ಉಲ್ಲಂಘಿಸಿರುವಜೆಡಿಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬೆಳವಣಿಗೆ ಗಮನಿಸಿದರೆ ಜಿಲ್ಲಾಡಳಿತ ಅವರೊಂದಿಗೆ ಶಾಮೀಲಾಗಿದೆ ಎಂಬ ಅನುಮಾನ ಮೂಡಿದ್ದು, ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಎಚ್ಚರಿಸಿದರು.

ಜಿಲ್ಲೆಯ ಚುನಾವಣೆ ಇತಿಹಾಸ ಬದಲಾಯಿಸಲು ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಎ.ಮಂಜು ಮಾತ್ರವಲ್ಲ, ಶಾಸಕರಾದ ಪ್ರೀತಂ ಜೆ. ಗೌಡ. ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಎಚ್.ಕೆ.ಕುಮಾರಸ್ವಾಮಿ ಅವರ ಸಹಕಾರ ಸಹ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ. ಅಭ್ಯರ್ಥಿ ಎಂ.ಶಂಕರ್, ಕಾಂಗ್ರೆಸ್ ಜಿಲ್ಲಾ
ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್, ಮುಖಂಡರಾದ ದೇವರಾಜೇಗೌಡ. ಬನವಾಸೆ ರಂಗಸ್ವಾಮಿ, ಎಚ್.ಕೆ. ಮಹೇಶ್, ಎಚ್.ಕೆ. ಜವರೇಗೌಡ, ಅಶೋಕ್ ನಾಯಕರಹಳ್ಳಿ, ರಂಜಿತ್, ಚಂದ್ರು, ಪಾರ್ವತಿ ವೆಂಕಟೇಶ್, ಜಮೀಲ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.