ಹಳೇಬೀಡು: ಶೈಕ್ಷಣಿಕ ಚಟುವಟಿಕೆ ಜೊತೆಯಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಂಡಿರುವ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕಲಾವತಿ ಜಿ.ಪಿ., ಸರ್ಕಾರಿ ನೌಕರರ ಸಂಘದ ರಾಷ್ಟ್ರಮಟ್ಟದ ಕ್ರೀಡಾಪಟು ಆಗಿದ್ದಾರೆ.
ಐದು ವರ್ಷದಿಂದ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟದಲ್ಲಿ ಭಾಗವಹಿಸಿ, ಕರ್ನಾಟಕ ರಾಜ್ಯ ನೌಕರರ ಸಂಘಕ್ಕೆ ಕೀರ್ತಿ ತಂದಿದ್ದಾರೆ. ಪ್ರಸಕ್ತ ವರ್ಷ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಗೆಲುವಿನ ಹಂತದವರೆಗೂ ಸೆಣಸಾಡಿ ಕರ್ನಾಟಕ ಸರ್ಕಾರಿ ನೌಕರ ಕ್ರೀಡಾಪಟುಗಳ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
2008 ರಿಂದ ಓಟದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟವನ್ನು ಕರ್ನಾಟಕದಿಂದ ಪ್ರತಿನಿಧಿಸುತ್ತಿರುವ ಕಲಾವತಿ 2019ರಲ್ಲಿ ಛತ್ತೀಸಗಢದ ರಾಯ್‌ಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ ಬೆಳ್ಳಿ, 200 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದಿದ್ದರು. 2008ರಿಂದಲೂ ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಒಂದಲ್ಲ ಒಂದು ಪದಕ ಪಡೆಯುತ್ತಿರುವ ಕಲಾವತಿ ಸತತ 7 ವರ್ಷದಿಂದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
‘ಸದ್ಯ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾಗಿರುವ ಕಲಾವತಿ ಎಂ.ಎ., ಬಿಇಡಿ ಪದವಿ ಪಡೆದಿದ್ದಾರೆ. ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿರುವ ಕಲಾವತಿ, ವಿದ್ಯಾರ್ಥಿ ಜೀವನದಲ್ಲಿ ಮೊಳಕೆಯೊಡೆದ ಕ್ರೀಡಾಸಕ್ತಿಯನ್ನು ಕುಂದದಂತೆ ಪೋಷಿಸುತ್ತಿದ್ದಾರೆ. ಶಾಲೆಯ ಆಡಳಿತ, ಬೋಧನೆ, ಮಕ್ಕಳ ವಿವಿಧ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿರುವ ಅವರು ತಮ್ಮ ಕ್ರೀಡಾಸಕ್ತಿಗೂ ಗಮನಹರಿಸಿ, ಪ್ರತಿದಿನ ತಾಲೀಮು ನಡೆಸುತ್ತಿದ್ದಾರೆ’ ಎಂದು ಶಾಲೆಯ ಉಪ ಪ್ರಾಂಶುಪಾಲ ಮುಳ್ಳಯ್ಯ ಹೇಳಿದರು.
ಶಾಲೆಯ ಒಳ ಹಾಗೂ ಹೊರಾಂಗಣ ಚಟುವಟಿಕೆಗಳಲ್ಲಿ ಕಲಾವತಿಯವರು ಸಕ್ರಿಯರಾಗಿದ್ದು, ಯೋಗದಲ್ಲೂ ಆಸಕ್ತಿ ಹೊಂದಿದ್ದಾರೆ. ಯೋಗ ತರಬೇತಿ ಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ಹಾಗೂ ನಾಗರಾಜು.
ಶಾಲೆ ಕಾಲೇಜು ಯಾವುದೇ ವಿಭಾಗದ ಶಿಕ್ಷಕರು ಮಕ್ಕಳು ಸಾಧನೆ ಮಾಡಿದರೆ ಅದು ಸಮಸ್ತ ಕೆಪಿಎಸ್ ಶಾಲೆಗೆ ಸಲ್ಲುತ್ತದೆ. ರಾಷ್ಟ್ರೀಯ ಕ್ರೀಡಾ ದಿನದಂದು ಕೆಪಿಎಸ್ ಶಾಲೆಯ ಕ್ರೀಡಾ ಸಾಧಕರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.– ವಿನುತಾ, ಕೆಪಿಎಸ್ ಶಾಲೆ ಪ್ರಾಂಶುಪಾಲೆ
ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮ ದಿನದಂದು ನಮ್ಮ ಸಂಘದ ಕ್ರೀಡಾ ಸಾಧಕಿ ಕಲಾವತಿ ಜಿ.ಪಿ. ಅವರ ಕ್ರೀಡಾ ಸಾಧನೆ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ.– ಎಸ್.ಬಿ. ಪಾಲಾಕ್ಷ ,ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನಿರ್ದೇಶಕ
‘ಕ್ರೀಡಾಸಕ್ತಿಯಿಂದ ಹಿಂದೆ ಸರಿದಿಲ್ಲ’
2024 ರಲ್ಲಿ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟ ಹಾಗೂ 2025 ರಲ್ಲಿ ರಾಷ್ಟ್ರಮಟ್ಟದ ನೌಕರರ ಸಂಘದ ಕ್ರೀಡಾಕೂಟದಲ್ಲಿ ಕರ್ನಾಟಕ ಪ್ರತಿನಿಧಿಸಿ ಗೆಲುವಿನ ಹಂತದವರೆಗೂ ಪೈಪೋಟಿ ನೀಡಿದ್ದೇನೆ. ಕ್ರೀಡಾಸಕ್ತಿಯಿಂದ ಹಿಂದೆ ಸರಿದಿಲ್ಲ ಎನ್ನುತ್ತಾರೆ ಶಿಕ್ಷಕಿ ಕಲಾವತಿ.
2006 ರಿಂದ ರಾಷ್ಟ್ರಮಟ್ಟದವರೆಗೂ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದೇನೆ. ಶೈಕ್ಷಣಿಕ ಚಟುವಟಿಕೆಯಲ್ಲಿಯೂ ಆಸಕ್ತಿ ಹೊಂದಿದ್ದೇನೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಇಲಾಖೆಯ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದೇನೆ. ಮಹಿಳಾ ಸಬಲೀಕರಣ ಸಂಘದಿಂದ ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.