ADVERTISEMENT

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ 15ರಿಂದ: ಸಚಿವ ನಾಗೇಶ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:21 IST
Last Updated 6 ಸೆಪ್ಟೆಂಬರ್ 2021, 8:21 IST
ಹೊಳೆನರಸೀಪುರಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ನಾಗೇಶ್‌ ಅವರಿಗೆ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದವರು ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿದರು
ಹೊಳೆನರಸೀಪುರಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ನಾಗೇಶ್‌ ಅವರಿಗೆ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದವರು ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿದರು   

ಹೊಳೆನರಸೀಪುರ: ‘ಎರಡೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆ.8 ಕೊನೆ ದಿನ. 15ರಿಂದ ಕೌನ್ಸೆಲಿಂಗ್‌ ಆರಂಭಗೊಳ್ಳಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ತಾಲ್ಲೂಕಿನ ಬೆಟ್ಟದಗುಳ್ಳದಪುರ ಸಮೀಪ ಇರುವ ಮನೆ ದೇವರು ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಶಿಕ್ಷಕರಿಗೆ ರಾಜ್ಯ ಸರ್ಕಾರ ಯಾವುದೇ ಅನ್ಯಾಯ ಮಾಡಿಲ್ಲ. ಶಿಕ್ಷಕರ ಹಿತ ದೃಷ್ಟಿಯಿಂದ ವರ್ಗಾವಣೆಗೆ ಕ್ರಮ ತೆಗೆದುಕೊಂಡಾಗಲೆಲ್ಲಾ ಶಿಕ್ಷಕರ ಸಂಘಟನೆಗಳು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ವರ್ಗಾವಣೆ ನಿಲ್ಲಿಸುತ್ತಿವೆ. ಯಾರೇ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಎಲ್ಲರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಹಾಗೂ ಸೂಕ್ತ ಕ್ರಮ ಕೈಗೊಂಡು ಶಿಕ್ಷಕರ ವರ್ಗಾವಣೆ ಆರಂಭಿಸಲಾಗುತ್ತಿದೆ’ ಎಂದರು.

‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ತರಗತಿಗಳನ್ನು ಆರಂಭಿಸಲು ಚಿಂತಿಸಲಾ ಗುತ್ತಿದೆ. ಇನ್ನೂ ನಿರ್ಧಾರ ಮಾಡಿಲ್ಲ. ಹಾಗೇನಾದರೂ ಮತ್ತೆ ಸಮಸ್ಯೆ ಕಂಡು ಬಂದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ದೇವಾಲಯದ ಅರ್ಚಕ ವೆಂಕಟೇಶಾಚಾರ್‌ ಸಚಿವರನ್ನು ಗೌರವಿಸಿದರು. ಶಾಸಕ ಎ.ಟಿ.ರಾಮಸ್ವಾಮಿ, ಡಿಡಿಪಿಐ ಪ್ರಕಾಶ್, ತಾ.ಪಂ. ಇಒ ಕೆ.ಯೋಗೇಶ್, ಬಿಇಒ ಭಾಗ್ಯಮ್ಮ, ಬಿಆರ್‌ಸಿ ಸೌಭಾಗ್ಯ, ನಿವೃತ್ತ ಪ್ರಾಂಶುಪಾಲ ಪುಟ್ಟಸೋಮಪ್ಪ ಇದ್ದರು.

ಮನವಿ: ಶಿಕ್ಷಕರ ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಯತೀಶ್‌, ವಿಶ್ವನಾಥ್‌, ಬಸವರಾಜು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.