ಹಾಸನ: ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ. ಮೊದಲಿಂದಲೂ ಶಿಕ್ಷಣವೆಂದರೆ ನನಗೆ ಒಲವು. ನಾವು ಉನ್ನತ ಪದವಿ ಹೊಂದಲು ಶಿಕ್ಷಕರೇ ಕಾರಣ. ಹಾಗಾಗಿ ನಮ್ಮ ಗುರುಗಳಿಗೆ ನಮನ ಹೇಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿಸ್ವಾರ್ಥವಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು, ಜೀವನ ಮಾಡುತ್ತಿರುವವರು ಶಿಕ್ಷಕರು. ಪ್ರತಿಯೊಂದು ವಿಷಯದಲ್ಲಿಯೂ ಗುರುಗಳನ್ನು ಕಾಣುವ ಸಂಸ್ಕೃತಿ ಇರುವ ದೇಶ ನಮ್ಮದು. ಗುರುವಿನಿಂದ ಶಿಕ್ಷಣ ಕಲಿಯುವುದೇ ನಿಜವಾದ ಕಲಿಕೆ ಎಂದರು.
‘ಸಂಪೂರ್ಣ ವ್ಯಕ್ತಿತ್ವ ರೂಪಿಸಲು ಗುರುವಿನ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವುದೇ ತಂತ್ರಜ್ಞಾನ ಮುಂದುವರಿದರೂ, ಕೃತಕ ಬುದ್ಧಿಮತ್ತೆ ಬಂದರೂ ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದ ಅವರು, ಶಿಕ್ಷಕರಿಂದ ಮಾತ್ರ ಕಲಿಯುವಂಥದ್ದಿಲ್ಲ ಅದರ ಜೊತೆಗೆ ಪ್ರತಿಯೊಬ್ಬರಿಂದಲೂ ಪ್ರತಿಕ್ಷಣವೂ ಕಲಿಯುವಂಥದ್ದು ಇದೆ. ನಿಜವಾಗಿಯೂ ಸಂತೋಷವಾಗಿರುವ ಶಿಕ್ಷಕನೇ ಒಳ್ಳೆಯ ಉತ್ತಮ ಶಿಕ್ಷಕರು. ಅವರೇ ಒಳ್ಳೆಯ ಶಿಕ್ಷಣ ನೀಡಲಿಕ್ಕೆ ಸಾಧ್ಯ’ ಎಂದು ತಿಳಿಸಿದರು.
‘ಶಿಕ್ಷಣಕ್ಕೆ ಸಾವಿತ್ರಿಬಾಯಿ ಪುಲೆ, ಜ್ಯೋತಿಬಾ ಪುಲೆ, ರಾಧಾಕೃಷ್ಣನ್ ಸೇರಿದಂತೆ ಎಲ್ಲರ ಕೊಡುಗೆ ಅಪಾರ. ಸರ್ಕಾರಿ ಶಾಲೆ ಉಳಿಸಿ ಅಭಿವೃದ್ಧಿಪಡಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನೀವೆಲ್ಲರೂ ಮನಸ್ಸು ಮಾಡಿದ್ದೀರಿ. ಆ ಕನಸು ಯಶಸ್ವಿಯಾಗಲಿ’ ಎಂದು ಹಾರೈಸಿದರು.
ಚಂದ್ರಕುಮಾರ್ ಎಂಬುವವರು ಉತ್ತರ ಬಡಾವಣೆ ಶಾಲೆಗೆ ₹ 10 ಸಾವಿರ ದೇಣಿಗೆಯನ್ನು ಆ ಶಾಲೆಯ ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಅವರ ಮೂಲಕ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ, ‘ಪ್ರತಿಯೊಬ್ಬರು ಅವರವರ ಸಾಮರ್ಥ್ಯ ಮೇರೆಗೆ ಸರ್ಕಾರಿ ಶಾಲೆ ಉಳಿಸಲು ಪ್ರಯತ್ನಿಸಬೇಕು’ ಎಂದರು.
ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಧ್ಯಾಪಕ ಹಂಪನಹಳ್ಳಿ ತಿಮ್ಮೇಗೌಡ, ಶಿಕ್ಷಕರನ್ನು ಗುರುತಿಸಿ, ವಿದ್ಯೆ ಕಲಿತ ವಿದ್ಯಾರ್ಥಿಗಳು, ಸಮಾಜ ಈ ದಿನ ಆಚರಿಸಬೇಕು. ಶಿಕ್ಷಕರಿಗೆ ಸಮಾಜದಲ್ಲಿರುವ ಗೌರವ ಸಮಾಜದಲ್ಲಿ ಬೇರೆಯವರಿಗಿಲ್ಲ. ಶಿಕ್ಷಕರು ಆತ್ಮವಿಶ್ವಾಸ, ಆತ್ಮವಿಮರ್ಶೆ, ಬದ್ಧತೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಶಿಕ್ಷಣ ಇಂದು ಜ್ಞಾನದಿಂದ, ಅರಿವಿನಿಂದ, ವಿವೇಕದಿಂದ ದೂರ ಆಗುತ್ತಿದೆ. ಅದನ್ನು ಉಳಿಸುವ ಕೆಲಸ ನೀವು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಮತ್ತು ಜಿಲ್ಲೆಯ ಎಲ್ಲಾ ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕರನ್ನು ವಿದ್ಯಾರ್ಥಿಗಳು ಪೂಜ್ಯ ಭಾವನೆಯಲ್ಲಿ ನೋಡಿದರೆ ಉನ್ನತ ಸ್ಥಾನ ಹೊಂದುತ್ತಾರೆ. ತಾಯಿಯೇ ಮೊದಲ ಗುರು. ಕ್ರಮಬದ್ಧವಾಗಿ ಶಿಕ್ಷಣ ಕಲಿಯಲು ಗುರುಗಳು ಬೇಕು.ಹೇಮಲತಾ ಎಂ.ಕೆ. ಮೇಯರ್
ಓದುವ ಹಂತದಲ್ಲಿಯೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದವರು ರಾಧಕೃಷ್ಣನ್. ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ.ಬಿ.ಪಿ ಕೃಷ್ಣೇಗೌಡ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
‘ಶಿಕ್ಷಕರದ್ದು ನಿಸ್ವಾರ್ಥ ಸೇವೆ’:
‘ಶಿಕ್ಷಕರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು ಶಿಕ್ಷಕರು ಪವಿತ್ರ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲರೂ ತಾವು ಓದಿದ ಶಾಲೆಗೆ ವಿದ್ಯೆ ಕಲಿಸಿದ ಗುರುಗಳಿಗೆ ಧನ್ಯವಾದ ತಿಳಿಸಬೇಕು’ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು. ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಅವುಗಳ ಜೀರ್ಣೋದ್ಧಾರ ಮಾಡುವ ಕೆಲಸವನ್ನು ಕೈಗೆತ್ತುಕೊಳ್ಳುತ್ತೇನೆ ಎಂದ ಅವರು ‘ಚುನಾವಣೆ ವೇಳೆ ಹಾಗೂ ಮತ್ತಿತರ ಸಂದರ್ಭದಲ್ಲಿ ಶಿಕ್ಷಕರು ತಮ್ಮ ಕಷ್ಟಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೀರಿ. ನಿಮಗೆ ಭಗವಂತ ಒಳ್ಳೆಯದನ್ನು ಮಾಡಲಿ’ ಎಂದರು. ‘ಇತ್ತೀಚೆಗೆ ರೈತರು ಮಕ್ಕಳ ಶಾಲೆಗೆ ಕಳುಹಿಸುವ ಬದಲು ಹೊಲದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೆ ಮಾಡದೇ ಶಾಲೆಗೆ ಕಳುಹಿಸಬೇಕು. ತಂದೆಯ ಹೆಸರಿನಲ್ಲಿ ಎರಡು ಶಾಲೆಗಳನ್ನು ತೆರೆಯುತ್ತೇನೆ’ ಎಂದು ತಿಳಿಸಿದರು. ಗುರುಭವನದ ಕೆಲಸ ಮಾಡಿಸಿ ಕೊಡುವಂತೆ ಮಾಡಿದ ಮನವಿ ಸ್ವೀಕರಿಸಿದ ಅವರು ಮುಂದಿನ ವರ್ಷದೊಳಗೆ ಕೆಲಸ ಮಾಡಿಸಿ ಕೊಡುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.