ADVERTISEMENT

ದೇವಾಲಯಗಳು ನೆಮ್ಮದಿಯ ತಾಣಗಳು: ಶಾಸಕ ಕೆ.ಎಂ. ಶಿವಲಿಂಗೇಗೌಡ

ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 14:14 IST
Last Updated 2 ಡಿಸೆಂಬರ್ 2023, 14:14 IST
ಅರಸೀಕೆರೆ ತಾಲ್ಲೂಕಿನ ಕಾರುಬೋರನಹಟ್ಟಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿದರು
ಅರಸೀಕೆರೆ ತಾಲ್ಲೂಕಿನ ಕಾರುಬೋರನಹಟ್ಟಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿದರು    

ಅರಸೀಕೆರೆ: ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು, ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಕರುಣಿಸುವ ಶ್ರದ್ಧಾ ಕೇಂದ್ರಗಳಾಗಿವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ತಾಲ್ಲೂಕಿನ ಕಾರುಬೋರನಹಟ್ಟಿ ಗ್ರಾಮದ ಸತ್ಯಮ್ಮದೇವಿ, ದೊಡಮ್ಮ ದೇವಿ ಹಾಗೂ ದೂತರಾಯ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನಾತನ ಧರ್ಮ ಹಾಗೂ ಸಂಸ್ಕೃತಿಯ ಪರಂಪರೆಯು ಶ್ರೀಮಂತ ಕೊಡುಗೆಯಾಗಿದ್ದು, ಮಠಮಾನ್ಯಗಳು ಹಾಗೂ ದೇವಾಲಯಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮೂಲಕ ಆತನ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕರುಣಿಸುವ ಕ್ಷೇತ್ರಗಳಾಗಿವೆ ಎಂದರು.

ADVERTISEMENT

ಸನಾತನ ಸಂಸ್ಕೃತಿಯ ಮಠಮಾನ್ಯಗಳು ಹಾಗೂ ದೇವಾಲಯಗಳನ್ನು ಉಳಿಸಿ ಬೆಳೆಸುವ ಜತೆಗೆ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಧಾರ್ಮಿಕ ಸಮಾರಂಭಗಳು ಸೂಕ್ತ ವೇದಿಕೆ. ನಮ್ಮಲ್ಲಿನ ಆತ್ಮಜ್ಞಾನ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.

ದೇವರು, ಧರ್ಮ, ತಂದೆ– ತಾಯಿ, ಗುರು ಹಿರಿಯರು ಎನ್ನುವ ಪೂಜ್ಯಭಾವನೆಗಳಲ್ಲಿ ಉತ್ತಮ ಸಂಸ್ಕಾರವನ್ನು ಪಡೆದು, ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದೇವೆ. ಆದರೆ ಪಾಶ್ಚಿಮಾತ್ಯ ಜನರು ಸಕಲ ವೈಭೋಗದ ಶ್ರೀಮಂತಿಕೆಯನ್ನು ತೊರೆದು, ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಭಾರತದ ಕಡೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಧರ್ಮದ ಆಚರಣೆಯಿಂದಲ್ಲೇ ಮನುಷ್ಯ ತನ್ನ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎನ್ನುವ ಇತಿಹಾಸವನ್ನು ಕಂಡಿರುವ ನಾವು, ದೇವಾಲಯಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿದರು. ರಾಮಲಿಂಗಪ್ಪ, ದುಡ್ಡಣ್ಣ, ಬೈರೇಶ್, ಕಾಂತರಾಜ್, ರಾಮು, ನಂದೀಶ್, ಲೋಕೇಶ್, ಮಂಜುಳಾಬಾಯಿ, ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.