ಹಳೇಬೀಡು: ಪರಿಸರದಿಂದ ಉಸಿರಾಡುತ್ತಿದ್ದೇವೆ. ಪರಿಸರ ಇಲ್ಲದೆ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ ಎಂದು ಬೇಲೂರು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಶಿಕಲಾ ಹೇಳಿದರು.
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಟ್ಟ, ಗುಡ್ಡ, ನದಿ, ಸಮುದ್ರಗಳನ್ನು ಕೃತಕವಾಗಿ ನಿರ್ಮಿಸಲು ಸಾಧ್ಯವಿಲ್ಲ. ಜೀವಿಗಳಿಗೆ ಅಗತ್ಯವಿರುವ ಪರಿಸರವನ್ನು ಪ್ರಕೃತಿ ನೀಡಿದೆ. ಅವುಗಳನ್ನು ಉಳಿಸಿಕೊಳ್ಳುವುದು. ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಗಿಡ ನೆಡುವುದು ಒಂದು ದಿನಕ್ಕೆ ಮಾತ್ರ ಸಿಮೀತವಾಗಬಾರಾದು. ನೆಟ್ಟಂತಹ ಗಿಡಗಳಿಗೆ ನೀರು ಹಾಗೂ ಅಗತ್ಯ ಪೋಷಕಾಂಶಗಳನ್ನು ಕೊಟ್ಟು, ಹೆಮ್ಮರವಾಗಿ ಬೆಳೆಸಬೇಕು. ಪರಿಸರ ಸಂರಕ್ಷಣೆ ಒಂದು ದಿನಕ್ಕೆ ಸಿಮೀತವಾಗದೆ ನಿತ್ಯೋತ್ಸವ ಆಗಬೇಕು ಎಂದು ಶಶಿಕಲಾ ಹೇಳಿದರು.
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಯತೀಶ್ ಕುಮಾರ್.ಬಿ.ಜಿ ಮಾತನಾಡಿ, ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಅರಣ್ಯಗಳ ಪಾತ್ರ ಪ್ರಮುಖವಾಗಿದೆ. ಅರಣ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ರಾಜೇಗೌಡ ಅಧ್ಯಕ್ಷತೆವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಗ್ರೇಡ್–2 ತಹಶಿಲ್ದಾರ್ ಅಶೋಕ್.ಕೆ.ಬಿ, ವಲಯ ಅರಣ್ಯ ಅಧಿಕಾರಿ ಶೈಲಾ, ಉಪ ಪ್ರಾಂಶುಪಾಲ ಮುಳ್ಳಯ್ಯ, ಉಪ ವಲಯ ಅರಣ್ಯ ಅಧಿಕಾರಿಗಳಾದ ಪ್ರವೀಣ್ ಕುಮಾರ್, ಕೃಷ್ಣಪ್ಪ ಪೂಜಾರ್, ಪಿಡಿಒ ಎಸ್.ಸಿ.ವಿರೂಪಾಕ್ಷ, ಎಎಸ್ಐ ಆನಂದ್ ಆರಾಧ್ಯ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ವಕೀಲರಾದ ಶ್ರೀಧರ, ಶಂಕರಾನಂದ, ಮಲ್ಲಿಕಾರ್ಜುನ ಭಾಗವಹಿಸಿದ್ದರು.
ಬೇಲೂರು ಜೆಎಂಎಫ್‌ಸಿ ನ್ಯಾಯಾಲಯ, ಕಾನುನು ಸೇವೆಗಳ ಪ್ರಾಧಿಕಾರ, ಬೇಲೂರು ವಕೀಲರ ಸಂಘ, ತಾಲ್ಲೂಕು ಆಡಳಿತ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಪರಿಸರ ದಿನಾಚರಣೆ ನಡೆಸಲಾಯಿತು.
ಜಾಗೃತಿ ಜಾಥಾ: ಹಳೇಬೀಡಿನ ಎಸ್‌ಜಿಆರ್ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಗುರುವಾರ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಯಿತು. ಶಾಲೆಯ ಕಾರ್ಯದರ್ಶಿ ಎಚ್.ಆರ್.ಸುರೇಶ್ ಜಾಥಾಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು. ಶಾಲೆಯ ಸ್ಕೌಟ್ಸ್, ಗೈಡ್ಸ್ ಘಟಕದವರು ಜಾಥಾಕ್ಕೆ ಕೈ ಜೋಡಿಸಿದ್ದರು. ಮುಖ್ಯ ಶಿಕ್ಷಕರಾದ ಸಿದ್ದೇಶ್, ಮಮತ.ಬಿ.ಎಲ್ ಪಾಲ್ಗೊಂಡಿದ್ದರು.
ಪರಿಸರ ಜಾಗೃತಿ: ಹಗರೆ ಗ್ರಾಮದ ದೇವಿರಮ್ಮ ವನಸಿರಿ ಬಳಗದ ಆಶ್ರಯದಲ್ಲಿ ಲಿಂಗಪ್ಪನಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಶಾಲಾ ಮೈದಾನದಲ್ಲಿ ಗಿಡ ನೆಡಲಾಯಿತು. ಪರಿಸರ ಪ್ರಿಯ ಸಾಲು ಮರದ ಸದಾಶಿವಯ್ಯ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಿದರು.
ಮುಖ್ಯ ಶಿಕ್ಷಕ ತಾರೇಶ ನಾಯ್ಕ.ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಲೋಕೇಶಪ್ಪ, ರವಿಶಂಕರ, ವೀಣಾ, ಲಕ್ಷ್ಮಣ, ಮಹಾದೇವಮ್ಮ, ತಾಜುನ್ನಿಸಾ, ಸುಜಾತಾ, ಗಿರಿಜಮ್ಮ, ಲೋಕೇಶ್, ಬಸವರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.