ಆಲೂರು ತಾಲ್ಲೂಕಿನ ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಆಲೂರು: ಸರ್ಕಾರಿ ಶಾಲೆಗಳನ್ನು ಉಳಿಸಿ–ಬೆಳೆಸಬೇಕು ಎಂಬ ಉದ್ದೇಶದಿಂದ ಸುಳುಗೋಡು ಕೂಡಿಗೆ ಗ್ರಾಮಸ್ಥರು, ಪೋಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ₹7.61 ಲಕ್ಷ ಮೌಲ್ಯದ ಹೊಸ ಶಾಲಾ ವಾಹನ ಕೊಂಡಿದ್ದಾರೆ. ಇದರ ಪ್ರಾರಂಭೋತ್ಸವ ಮೇ 25ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ.
ಕೆಲ ದಶಕಗಳಿಂದೀಚೆಗೆ ಖಾಸಗಿ ಶಾಲೆಗಳು ವಾಹನಗಳ ವ್ಯವಸ್ಥೆ ಮಾಡಿದ್ದು, ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕರೆದೊಯ್ಯಲಾಗುತ್ತದೆ. ಮಕ್ಕಳ ಸುರಕ್ಷತೆ ಮತ್ತು ಆಧುನಿಕ ಶೈಲಿಯಿಂದಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಇದೀಗ ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4 ಕಿ.ಮೀ. ವ್ಯಾಪ್ತಿಗೆ ಒಳಪಡುವ ಸುಳುಗೋಡು, ಮಂದಿರ, ರಾಮನಹಳ್ಳಿ, ಗರಿಗಟ್ಟ ಕಾಲೊನಿ, ಸಿದ್ದಾಪುರ, ಕ್ಯಾತನಹಳ್ಳಿ, ಮೇರ್ವೆ ಗ್ರಾಮದ ವಿದ್ಯಾರ್ಥಿಗಳು ಬರುತ್ತಾರೆ. ಹೀಗಾಗಿ ಈ ಗ್ರಾಮಗಳ ಹಲವು ಪೋಷಕರು, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಿಕ್ಷಕರರು ಸೇರಿದಂತೆ ಸುಮಾರು 400 ದಾನಿಗಳು ಸೇರಿ ₹7.61 ಲಕ್ಷ ಸಂಗ್ರಹಿಸಿದ್ದು, ಹೊಸ ಶಾಲಾ ವಾಹನ ಖರೀದಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಶಾಲೆಗಾಗಿ ವಾಹನ ಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅರವಿಂದ ವಾಹನ ಶೋ ರೂಂ ವ್ಯವಸ್ಥಾಪಕರು, ಕಂಪನಿಯಿಂದ ದೊರಕುವ ವಿಶೇಷ ಸೌಲಭ್ಯಗಳನ್ನು ನೀಡಿ, ಶಾಲಾ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿದರು.
ಈಚೆಗೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಇಮ್ಮಡಿಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಎರಡು ಸ್ಥಾನಗಳನ್ನು ಪಡೆದಿರುವ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಿದವರು. ಯಾವುದೆ ಶುಲ್ಕವಿಲ್ಲದೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ದೊರಕುತ್ತಿದೆ ಎಂದು ಹಲವು ಪೋಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
‘ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷರಿರುತ್ತಾರೆ. ಇವರಿಗೆ ಪೋಷಕರು, ಗ್ರಾಮಸ್ಥರು ಸಹಕಾರ ನೀಡಿದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಾರೆ. ಎಲ್ಲರ ಸಹಕಾರದೊಂದಿಗೆ ಶಾಲಾ ವಾಹನವನ್ನು ಮಕ್ಕಳ ಮನೆ ಬಾಗಿಲಿಗೆ ಕಳಿಸಿ, ಮಕ್ಕಳನ್ನು ಕರೆತಂದು ವಾಪಸ್ ಮನೆಗೆ ಬಿಡುವ ವ್ಯವಸ್ಥೆ ಮಾಡಿದ್ದೇವೆ. ದುಬಾರಿ ವ್ಯಯ ಮಾಡುವುದನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಎಲ್ಲರೂ ಮುಂದಾಗಿದ್ದಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಸುಮಿತ್ರಾ ತಿಳಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಿ ಉತ್ತಮ ಫಲಿತಾಂಶ ಬರದಿದ್ದರೆ ಶಿಕ್ಷಕರನ್ನು ಪ್ರಶ್ನಿಸುವ ಹಕ್ಕು ಪೋಷಕರಿಗಿದೆ. ಮಕ್ಕಳು ಕೇವಲ ಅಂಕ ತೆಗೆದರೆ ಸಾಲದು. ಬಾಲ್ಯದಲ್ಲಿ ಸಂಸ್ಕೃತಿ ಕಲಿಸಬೇಕು. ಅದು ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ.ಲತಾ, ಪೋಷಕಿ, ಸುಳುಗೋಡು ಗ್ರಾಮ
ಸರ್ಕಾರಿ ಶಾಲೆಗಳನ್ನು ಉಳಿಸಲು ಪೋಷಕರು ಕೈ ಜೋಡಿಸಬೇಕು. ಗ್ರಾಮಸ್ಥರು ಪೋಷಕರು ಹಳೆಯ ವಿದ್ಯಾರ್ಥಿಗಳು ಸೇರಿ ನೂತನ ವಾಹನವನ್ನು ಖರೀದಿಸಿದ್ದಾರೆ. ಪ್ರಸಕ್ತ ಸಾಲಿನಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಆರಂಭಿಸಲಾಗುತ್ತದೆ.ಕೆ.ಎಲ್. ಪುರುಷೋತ್ತಮ, ಸುಳಗೋಡು ಶಾಲೆ ಮುಖ್ಯ ಶಿಕ್ಷಕ
ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯೊಂದು ವಾಹನ ಖರೀದಿಸಿರುವುದು ಇದೇ ಪ್ರಥಮ. ಸಹಕಾರ ನೀಡಿರುವ ಎಲ್ಲರಿಗೂ ಅಭಿನಂದಿಸುತ್ತೇನೆ. ಶಿಕ್ಷಕರು ತಮ್ಮ ಸಾಮರ್ಥ್ಯ ಮೀರಿ ಗುಣಮಟ್ಟದ ಶಿಕ್ಷಣ ನೀಡಲಿದ್ದಾರೆ.ಎ.ಜೆ. ಕೃಷ್ಣೇಗೌಡ, ಆಲೂರು ಕ್ಷೇತ್ರ ಶಿಕ್ಷಣಾಧಿಕಾರಿ
ಸುಳುಗೋಡು ಗ್ರಾಮದ ಸರ್ಕಾರಿ ಶಾಲೆಗೆ ವಾಹನ ಕೊಳ್ಳಲು ಸಹಕರಿಸಿರುವ ಎಲ್ಲರಿಗೂ ಅಭಿನಂದಿಸುತ್ತೇನೆ. ಪ್ರತಿ ಶಾಲಾ ಕೇಂದ್ರದಲ್ಲಿ ಇಂತಹ ಬೆಳವಣಿಗೆಯಾಗಬೇಕು. ಸರ್ಕಾರದಿಂದ ದೊರಕುವ ಸೌಲಭ್ಯ ಬಳಸಿಕೊಳ್ಳಬೇಕು.ಸಿಮೆಂಟ್ ಮಂಜು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.