ಹಳೇಬೀಡು: ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಧಕಿಯಾಗಿರುವ ಹಳೇಬೀಡಿನ ಎಸ್.ಜಿ.ಆರ್ ಶಾಲೆಯ ವಿದ್ಯಾರ್ಥಿನಿ ಆರ್.ವಿ. ಧನ್ಯಾಗೆ ಲಿಟಲ್ ಸ್ಟಾರ್ ಬಿರುದಿನೊಂದಿಗೆ ಏಕಲವ್ಯ ಪ್ರಶಸ್ತಿ ಪಡೆದಿದ್ದಾಳೆ.
ಸ್ಕೌಟ್ಸ್ ಮತ್ತು ಗೈಡ್ಸ್ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅದ್ವಿತೀಯ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ. ಹಾಸನದ ಅಂಬೇಡ್ಕರ್ ಭವನದಲ್ಲಿ ಈಚೆಗೆ ನಡೆದ ಭೂ ದಿನಾಚರಣೆ ಹಾಗೂ ಏಕಲವ್ಯ ಮುಕ್ತದಳ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಧನ್ಯಾಳಿಗೆ ಪ್ರಶಸ್ತಿ ಬಂದಿರುವುದು ಇದೇ ಮೊದಲಲ್ಲ. 2020 ರಾಷ್ಟ್ರಪತಿ ಬುಲ್‌ಬುಲ್ ಪ್ರಶಸ್ತಿ ಪಡೆದಿದ್ದಾಳೆ. ಹತ್ತಾರು ಬಾರಿ ಸಂಘ ಸಂಸ್ಥೆಗಳ ಗೌರವ ಪಡೆದಿದ್ದಾಳೆ. ಸ್ಕೌಟ್ಸ್, ಗೈಡ್ಸ್ ಚಟುವಟಿಕೆಯಲ್ಲಿ ಸದಾ ಮುಂದಾಗಿರುವ ಧನ್ಯಾ ಓದಿನಲ್ಲಿಯೂ ಮುಂದಿದ್ದಾಳೆ. 10ನೇ ತರಗತಿ ಓದುತ್ತಿರುವ ಧನ್ಯಾ, 2ನೇ ತರಗತಿಯಿಂದಲೂ ಸ್ಕೌಟ್ಸ್ , ಗೈಡ್ಸ್‌ನಲ್ಲಿ ಸಕ್ರಿಯಳಾಗಿದ್ದಾಳೆ. ವಿವಿಧ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿರುವ ಅವಳು ಬಹುಮುಖ ಪ್ರತಿಭೆಯಾಗಿದ್ದಾಳೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.
‘ಹಳೇಬೀಡು ಬಳಿಯ ರಾಮನಹಳ್ಳಿ ಗ್ರಾಮದ ಆರ್.ಎಚ್.ವೇಣುಮೂರ್ತಿ, ಹೇಮಾವತಿ ದಂಪತಿಯ ಪುತ್ರಿ ಧನ್ಯಾ, ಹಳ್ಳಿಯ ಸ್ಥಿತಿಗತಿ, ಜನಜೀವನ ನೋಡಿಕೊಂಡು ಬೆಳೆಯುತ್ತಿದ್ದು, ಕೃಷಿ, ಪರಿಸರ, ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾಳೆ’ ಎನ್ನುತ್ತಾರೆ ಗೈಡ್ಸ್ ಶಿಕ್ಷಕಿ ಬಿ.ಎಲ್.ಮಮತಾ.
‘ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಿ, ಹಾಸನ ಜಿಲ್ಲೆಯ ಕುರಿತು ಹಲವಾರು ಭಾಷಣ ಮಾಡಿದ್ದಾಳೆ. ಬೇರೆ ಜಿಲ್ಲೆ, ರಾಜ್ಯದವರಿಗೆ ಬೇಲೂರು, ಹಳೇಬೀಡು ವಿಶೇಷತೆಗಳನ್ನು ತಿಳಿಸಿದ್ದಾಳೆ. ಇಲ್ಲಿಯ ಉಡುಗೆ ತೊಡುಗೆಗಳನ್ನು ಧರಿಸಿ ಪ್ರಾಮುಖ್ಯತೆ ತಿಳಿಸಿದ್ದಾಳೆ. ಆಕಾಶವಾಣಿಯಲ್ಲಿ ಅನುಭವ ಹಂಚಿಕೊಂಡಿದ್ದಾಳೆ’ ಎಂದು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಆರ್.ಸುರೇಶ್ ತಿಳಿಸಿದ್ದಾರೆ.
ಧನ್ಯಾ ನಮ್ಮ ಶಾಲೆಯ ಹೆಮ್ಮೆಯ ಪ್ರತಿಭೆ. ಸಾಧನೆಯತ್ತ ಹೆಜ್ಜೆ ಇಟ್ಟು ಮುಂದೆ ಸಾಗುತ್ತಿದ್ದಾಳೆ. ಧನ್ಯಾಳ ಸೇವಾ ಮನೋಭಾವ ಮುಂದುವರಿಯಲಿ.ಎಚ್.ಆರ್. ಸುರೇಶ್, ಎಸ್‌ಜಿಆರ್ ಶಾಲೆ ಕಾರ್ಯದರ್ಶಿ
ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಸೇವಾ ಮನೋಭಾವದೊಂದಿಗೆ ಸಂಸ್ಕೃತಿ ಬೆಳೆಯುತ್ತಿದೆ. ಏಕಲವ್ಯ ಪ್ರಶಸ್ತಿ ಪಡೆದಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ.ಆರ್.ವಿ. ಧನ್ಯಾ ಸ್ಕೌಟ್ಸ್ ಗೈಡ್ಸ್ ಸಾಧಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.