ADVERTISEMENT

ಶ್ರವಣಬೆಳಗೊಳ: ಮಹಾಮಂಡಲ ವಿಧಾನಕ್ಕೆ ತ್ಯಾಗಿಗಳಿಂದ ಚಾಲನೆ

ಶ್ರವಣಬೆಳಗೊಳದಲ್ಲಿ 3 ರಿಂದ 8 ದಿನಗಳ ಕಾಲ ಬೃಹತ್ ವೈಭವದ ಸಿದ್ಧಚಕ್ರ ಆರಾಧನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:18 IST
Last Updated 3 ಜುಲೈ 2025, 14:18 IST
ಶ್ರವಣಬೆಳಗೊಳದ ಜೈನಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಸಿದ್ಧಚಕ್ರ ಮಹಾಮಂಡಲ ಆರಾಧನೆಯ ಅಂಗವಾಗಿ ರಚಿಸಿದ್ದ ಸಮವಸರಣ ಮಂಟಪದಲ್ಲಿ ವಿರಾಜಮಾನರಾಗಿರುವ ಸಿದ್ಧ ಭಗವಾನರು
ಶ್ರವಣಬೆಳಗೊಳದ ಜೈನಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಸಿದ್ಧಚಕ್ರ ಮಹಾಮಂಡಲ ಆರಾಧನೆಯ ಅಂಗವಾಗಿ ರಚಿಸಿದ್ದ ಸಮವಸರಣ ಮಂಟಪದಲ್ಲಿ ವಿರಾಜಮಾನರಾಗಿರುವ ಸಿದ್ಧ ಭಗವಾನರು   

ಶ್ರವಣಬೆಳಗೊಳ: ಇಲ್ಲಿಯ ಜೈನ ಮಠದ ಮುಂಭಾಗದಲ್ಲಿರುವ ಚಾವುಂಡರಾಯ ಸಭಾ ಮಂಟಪದಲ್ಲಿ ಜುಲೈ 3ರಿಂದ 10ರವರೆಗೆ 8 ದಿನಗಳ ಕಾಲ ಆಷಾಡ ಮಾಸದ ಅಷ್ಟಾಹ್ನಿಕ ಮಹಾ ಪರ್ವದ ಅಂಗವಾಗಿ ಸಿದ್ಧಚಕ್ರ ಮಹಾ ಮಂಡಲದ ಆರಾಧನೆಯು ಆಚಾರ್ಯ ವರ್ಧಮಾನ ಸಾಗರ ಮಹಾರಾಜರ ಸಂಘಸ್ಥ ತ್ಯಾಗಿಗಳ ಸಾನ್ನಿಧ್ಯ ಮತ್ತು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಸಿದ್ಧಚಕ್ರ ಆರಾಧನೆಯ ಪ್ರಯುಕ್ತ ಬೆಳಿಗ್ಗೆ ವ್ರತಿಕರಿಗೆ ಕಂಕಣ ಧಾರಣೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ರಜತದ ಪೀಠದಲ್ಲಿ ಪ್ರತಿಷ್ಠಾಪಿಸಿದ್ದ 24 ತೀರ್ಥಂಕರರಿಗೆ ಮತ್ತು ಸ್ಪಟಿಕ ಮಣಿಯ ಸಿದ್ಧ ಭಗವಾನರಿಗೆ ವ್ರತಿಕರಿಂದ ಅಭಿಷೇಕ ನಡೆಸಲಾಯಿತು. ವೇದಿಕೆಯ ಮುಂಭಾಗ ಧ್ವಜಾರೋಹಣ ನೆರವೇರಿದ ನಂತರ ರಚಿಸಿದ್ದ ಮಂಡಲದ ಸುತ್ತಾ ಅಷ್ಟ ಮಂಗಲಗಳನ್ನು ಮಂಗಲ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು.

ಸಮವಸರಣ ಮಂಟಪದ ಮಂಡಲದ ಮಧ್ಯದಲ್ಲಿ ಚತುರ್ಮುಖ ಜಿನ ಬಿಂಬಗಳನ್ನು ಮತ್ತು ಯಂತ್ರವನ್ನು ಇರಿಸಲಾಗಿತ್ತು. ಪ್ರಾಂಗಣದ ಶುದ್ಧಿಯೊಂದಿಗೆ ಣಮೋಕಾರ ಮಹಾ ಮಂತ್ರ ಪಠಿಸುತ್ತಾ ಸಿದ್ಧ ಚಕ್ರ ಯಂತ್ರಕ್ಕೆ ದ್ರವ್ಯಗಳಾದ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಪಲ ಮತ್ತು ಅರ್ಘ್ಯಗಳೊಂದಿಗೆ ಶಾಂತಿಧಾರಾ ಮಾಡಿ ಪುಷ್ಪಗಳನ್ನು ಅರ್ಪಿಸಲಾಯಿತು.

ADVERTISEMENT

ಈ ಆರಾಧನೆಯು ನಿರ್ವಿಘ್ನವಾಗಿ ನೆರವೇರಲೆಂದು ಅಷ್ಟ ದಿಕ್ಪಾಲಕರಿಗೆ ಪೂಜೆ ಸಲ್ಲಿಸಲಾಯಿತು. ವಿಧಾನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಮತ್ತು ಮಧ್ಯ ಪ್ರದೇಶದಿಂದ, ಆಗಮಿಸಿದ್ದ 710 ಕ್ಕೂ ಅಧಿಕ ವ್ರತಿಕರು ಪ್ರತ್ಯೇಕವಾಗಿ ಪೂಜೆ ಅರ್ಘ್ಯ ಹಾಗು ಜಯ ಮಾಲಾರ್ಘ್ಯಗಳನ್ನು ಸಮರ್ಪಿಸಿದರು.

ಪೂಜೆಯ ನೇತೃತ್ವವನ್ನು ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಎಸ್.ಪಿ.ಜಿನೇಶ್ ವಹಿಸಿದ್ದರು. ಪೂಜಾಷ್ಟಕಗಳಿಗೆ ಸಂಗೀತವನ್ನು ಉದ್ಗಾಂವ್‌ನ ಸುನೀಲ್ ಚೌಗಲೆ ಮತ್ತು ತಂಡ ನೆರವೇರಿಸಿದರು. ಸಿದ್ಧಚಕ್ರ ಮಹಾಮಂಡಲದ ಆರಾಧನೆಯ ಬಗ್ಗೆ ಅನೇಕ ತ್ಯಾಗಿಗಳು ಪ್ರವಚನ ನೀಡಿದರು. ವಿದ್ಯಾಸಾಗರ ಮಹಾರಾಜರು, ಧರ್ಮ ಸಾಗರ ಮಹಾರಾಜರು, ಸಿದ್ಧಾಂತ ಸಾಗರ ಮಹಾರಾಜರು, ಅನೇಕಾಂತಸಾಗರ, ಮಹಾರಾಜರು, ಆಗಮಸಾಗರ ಮಹಾರಾಜರು, ಆರ್ಯಿಕೆಯರಾದ ಸುವಿಧಿಮತಿ ಮಾತಾಜಿ, ಶಿವಮತಿ ಮಾತಾಜಿ, ಮತ್ತು ಸಂಘಸ್ಥ ತ್ಯಾಗಿಗಳು ಪಾಲ್ಗೊಂಡಿದ್ದರು.

ಶ್ರವಣಬೆಳಗೊಳದ ಜೈನಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಸಿದ್ಧಚಕ್ರ ಮಹಾಮಂಡಲ ಆರಾಧನೆಯ ನಿಮಿತ್ತ ರಚಿಸಿದ್ದ ಸಮವಸರಣ ಮಂಟಪದ ಮುಂಭಾಗದಲ್ಲಿ ವ್ರತಿಕರು ಭಕ್ತಿಯಿಂದ ನೃತ್ಯ ಮಾಡುತ್ತಿರುವುದು
ಶ್ರವಣಬೆಳಗೊಳದ ಜೈನಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಸಿದ್ಧಚಕ್ರ ಮಹಾಮಂಡಲ ಆರಾಧನೆಯಲ್ಲಿ ಪಾಲ್ಗೊಂಡಿದ್ದ ವ್ರತಿಕರು
ಶ್ರವಣಬೆಳಗೊಳದ ಜೈನಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಸಿದ್ಧಚಕ್ರ ಮಹಾಮಂಡಲ ಆರಾಧನೆಯಲ್ಲಿ ಪಾಲ್ಗೊಂಡಿದ್ದ ವ್ರತಿಕರು
ಶ್ರವಣಬೆಳಗೊಳದ ಜೈನಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಸಿದ್ಧಚಕ್ರ ಮಹಾಮಂಡಲ ಆರಾಧನೆಯಲ್ಲಿ ಸಾನಿಧ್ಯ ವಹಿಸಿದ್ದ ಆಚಾರ್ಯ ವರ್ಧಮಾನಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿ ವೃಂದದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.