
ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆಯ ಪ್ರಗತಿಪರ ಕೃಷಿಕ ಎಂ.ಸಿ. ರಂಗಸ್ವಾಮಿ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕೃಷಿ ಕ್ಷೇತ್ರದ ಸಾಧನೆ ಇತರರಿಗೆ ಮಾದರಿಯಾಗಿದ್ದು, 600 ಎಕರೆ ಪ್ರದೇಶದಲ್ಲಿ ನಡೆಸಿರುವ ಕೃಷಿ ಎಂಥವರನ್ನೂ ಬೆರಗಾಗಿಸುತ್ತದೆ. 100 ಎಕರೆ ಪ್ರದೇಶದಲ್ಲಿ ಕಾಫಿ, 100 ಎಕರೆ ಅಡಿಕೆ, ಅಡಿಕೆಯಲ್ಲಿ ಮಿಶ್ರ ಬೆಳೆಯಾಗಿ 50 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಏಲಕ್ಕಿ ಕೃಷಿ ನಡೆಸಿದ್ದಾರೆ.
ಅರಣ್ಯ ಕೃಷಿಯತ್ತ ಆಕರ್ಷಿತರಾಗಿ ತಮ್ಮ ಜಮೀನಿನಲ್ಲಿ ಸುಮಾರು ಸಾವಿರಾರು ಶ್ರೀಗಂಧದ ಗಿಡ ಬೆಳೆಸಿದ್ದಾರೆ. ಸಿಲ್ವರ್, ತೇಗ, ಹೆಬ್ಬೇವು ಸೇರಿದಂತೆ ವಿವಿಧ ಜಾತಿಯ ಮರಗಳ ಕೃಷಿ ನಡೆಸಿದ್ದಾರೆ. 5 ಸಾವಿರ ಅವಕಾಡೊ (ಬೆಣ್ಣೆಹಣ್ಣು), 3 ಸಾವಿರ ಸೀತಾಫಲ, 3 ಸಾವಿರ ಲಕ್ಷ್ಮಣ ಫಲ, 3 ಸಾವಿರ ನುಗ್ಗೆ, 3 ಸಾವಿರ ಹಲಸು, 6 ಸಾವಿರ ತೆಂಗಿನ ಗಿಡಗಳ ಕೃಷಿ ನಡೆಸಿದ್ದಾರೆ. ಹೈನುಗಾರಿಕೆಯನ್ನೂ ಅಳವಡಿಸಿಕೊಂಡಿರುವ ಇವರು ನೀರಾವರಿಗಾಗಿ ನಿರ್ಮಿಸಿಕೊಂಡಿರುವ 4 ಕೆರೆಗಳಲ್ಲಿ ಮೀನು ಸಾಕಣೆ ನಡೆಸುವ ಮೂಲಕ ಮತ್ಸೋದ್ಯಮ ಮತ್ತು ನಾಟಿ ತಳಿ ಕೋಳಿಗಳು, ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ರೈತರು, ಕೃಷಿ ವಿದ್ಯಾರ್ಥಿಗಳು ಇವರ ಜಮೀನಿಗೆ ಭೇಟಿ ನೀಡುತ್ತಾರೆ. ಇವರ ಸಾಧನೆ ಗುರುತಿಸಿ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ 2021 ನೇ ಸಾಲಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಗಿದೆ.
ರಂಗಸ್ವಾಮಿ ಅವರು ಹೈನುಗಾರಿಕೆ, ಅರಣ್ಯ ಕೃಷಿ, ತೋಟಗಾರಿಕೆ, ತಂಬಾಕು, ಅಡಿಕೆ, ಕಾಫಿ, ಏಲಕ್ಕಿ ಸೇರಿದಂತೆ ವಿವಿಧ ಕೃಷಿಗಳನ್ನು ಕೈಗೊಳ್ಳುವ ಮೂಲಕ ತಾಲ್ಲೂಕಿನಲ್ಲಿ ಉತ್ತಮ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಕೃಷಿ ಸಾಧನೆ ಗುರುತಿಸಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ. ಇತ್ತೀಚೆಗೆ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಪ್ರಸ್ತುತ ಕೃಷಿಕ ಸಮಾಜದ ಅರಕಲಗೂಡು ತಾಲ್ಲೂಕು ಘಟಕ, ಹಾಸನ ಜಿಲ್ಲಾ ಘಟಕಗಳ ಅಧ್ಯಕ್ಷರಾಗಿಯೂ ಎಂ.ಸಿ. ರಂಗಸ್ವಾಮಿ ಆಯ್ಕೆಯಾಗಿದ್ದಾರೆ.
ಬಂಗಾರ ಮನುಷ್ಯ ಪ್ರೇರಣೆ
‘ಸಮಗ್ರ ಕೃಷಿಗೆ ಪ್ರಶಸ್ತಿ ಬಂದಿದೆ. ನಾನು ಯಾವುದೇ ಪ್ರಶಸ್ತಿಯ ಹಿಂದೆ ಹೋದವನಲ್ಲ. ಪ್ರಶಸ್ತಿಯೇ ನನ್ನನ್ನು ಹುಡುಕಿಕೊಂಡು ಬಂದಿರುವುದು ಸಂತಸ ತಂದಿದೆ’ ಎಂದು ಎಂ.ಸಿ. ರಂಗಸ್ವಾಮಿ ತಿಳಿಸಿದರು. ‘1972 ರ ಕಾಲೇಜು ದಿನಗಳಲ್ಲಿ ಬಂಗಾರದ ಮನುಷ್ಯ ಚಿತ್ರ ನನ್ನ ಮೇಲೆ ಪರಿಣಾಮ ಬೀರಿತು. 1978ರಲ್ಲಿ ಪದವಿ ಶಿಕ್ಷಣ ಮುಗಿಸಿ ಕೃಷಿಯಲ್ಲಿ ತೊಡಗಿಸಿಕೊಂಡೆ. ಕೃಷಿ ನೆಮ್ಮದಿಯ ಬದುಕು ನೀಡಿದೆ. ಪ್ರಕೃತಿಯನ್ನು ನಂಬಿ ರೈತ ಕಾಯಕ ನಡೆಸಬೇಕು. ಕಾಲಕ್ಕೆ ತಕ್ಕಂತೆ ರೈತರೂ ಬದಲಾಗಬೇಕು’ ಎಂದು ಹೇಳಿದರು. ‘ಕೃಷಿಯಲ್ಲಿ ವೈಜ್ಞಾನಿಕತೆಯ ಜೊತೆಗೆ ಮಿಶ್ರತಳಿ ಬೆಳೆ ಪದ್ಧತಿ ಹಾಗೂ ತಜ್ಞರ ಸಲಹೆ ಅಳವಡಿಸಿಕೊಳ್ಳಬೇಕು. ಒಂದೇ ಬೆಳೆಗೆ ಜೋತು ಬೀಳದೇ ಅಗತ್ಯಕ್ಕೆ ತಕ್ಕಂತೆ ತೋಟಗಾರಿಕೆ ಅರಣ್ಯ ಕೃಷಿಗೆ ಒತ್ತು ನೀಡುವುದರಿಂದ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬಹುದು’ ಎನ್ನುತ್ತಾರೆ ರಂಗಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.