ADVERTISEMENT

ಬಾಹುಬಲಿಗೆ ಅವಹೇಳನ: ಜೈನರ ಮೌನ ಮೆರವಣಿಗೆ, ಅಯೂಬ್ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹ

ಅಯೂಬ್‌ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 3:59 IST
Last Updated 11 ಫೆಬ್ರುವರಿ 2022, 3:59 IST
ವೈರಾಗ್ಯಮೂರ್ತಿ ಬಾಹುಬಲಿ ಕುರಿತು ಮೈಸೂರಿನಲ್ಲಿ ಮುಸ್ಲಿಂ ಮುಖಂಡ ಅಯೂಬ್‌ಖಾನ್‌ ನೀಡಿದ ಹೇಳಿಕೆ ಖಂಡಿಸಿ ಶ್ರವಣಬೆಳಗೊಳದಲ್ಲಿ ಜೈನ್‌ ಸಮಾಜದವರು ಮೌನ ಮೆರವಣಿಗೆ ನಡೆಸಿದರು
ವೈರಾಗ್ಯಮೂರ್ತಿ ಬಾಹುಬಲಿ ಕುರಿತು ಮೈಸೂರಿನಲ್ಲಿ ಮುಸ್ಲಿಂ ಮುಖಂಡ ಅಯೂಬ್‌ಖಾನ್‌ ನೀಡಿದ ಹೇಳಿಕೆ ಖಂಡಿಸಿ ಶ್ರವಣಬೆಳಗೊಳದಲ್ಲಿ ಜೈನ್‌ ಸಮಾಜದವರು ಮೌನ ಮೆರವಣಿಗೆ ನಡೆಸಿದರು   

ಶ್ರವಣಬೆಳಗೊಳ: ‘ಭಗವಾನ್‌ ಬಾಹುಬಲಿ ಮೂರ್ತಿಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‌ ಮುಖಂಡ ಅಯೂಬ್‌ಖಾನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿಪಟ್ಟಣದ ಜೈನ ಸಮುದಾಯ ಮೌನ ಮೆರವಣಿಗೆ ನಡೆಸಿತು.

ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ, ದಿಗಂಬರ ಜೈನ ಸಮಾಜ, ರೈತ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಜನರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ನಾಡ ಕಚೇರಿಯ ಉಪ ತಹಶೀಲ್ದಾರ್‌ ನಂಜೇಗೌಡರಿಗೆ ಮನವಿ ಸಲ್ಲಿಸಿದರು.ನಂತರ ಸ್ಥಳೀಯ ಪೊಲೀಸ್‌ ಠಾಣೆಗೆ ತೆರಳಿ ಆಯೂಬ್‌ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆಪಿಎಸ್‌ಐ ಸ್ವಾಮಿ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಮೆರವಣಿಗೆ ನಂತರ ಚಾವುಂಡರಾಯ ಸಭಾಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಮೈಸೂರಿನ ರಾಜಕಾರಣಿಯೊಬ್ಬರು ಶ್ರವಣಬೆಳಗೊಳದ ವೈರಾಗ್ಯ ಮೂರ್ತಿ ಬಾಹುಬಲಿ ಸ್ವಾಮಿಯ ಕುರಿತು ಅಶ್ಲೀಲ ಪದ ಬಳಸಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಗ್ಗೆ ನಮಗೆ ಅತೀವ ನೋವು ಉಂಟಾಗಿದೆ’ ಎಂದು ಹೇಳಿದರು.

ADVERTISEMENT

‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿಯ ಸಂದೇಶವನ್ನು ನೀಡುತ್ತಿರುವ ಗೊಮ್ಮಟೇಶ್ವರ ಬಾಹುಬಲಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಕುರಿತು ಶ್ರವಣಬೆಳಗೊಳದ ಎಲ್ಲಾ ಸಮಾಜ ಬಾಂಧವರು ಶಾಂತಿ ಮೌನ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಇಂತಹ ಘಟನೆಗಳು ಮುಂದೆಂದೂ ನಡೆಯದಂತೆ ಗಮನಹರಿಸುವಂತೆ’ ಮನವಿ ಶ್ರೀಗಳು ‘ನಾವೂ ಕೂಡ ಈ ರೀತಿಯ ಅನುಚಿತ ಘಟನೆಗಳು ನಡೆಯಬಾರದೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ’ ಎಂದರು.

ಕಾನೂನು ಕ್ರಮ ಕೈಗೊಳ್ಳುವಂತೆ ನಾಡ ಕಚೇರಿ ಉಪ ತಹಶೀಲ್ದಾರ್‌ ನಂಜೇಗೌಡ ಹಾಗೂ ಸ್ಥಳೀಯ ಪಿಎಸ್‌ಐ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಮೆರವಣಿಗೆಯಲ್ಲಿ ಸೋಂದಾ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿ, ಡಾ.ಯುವರಾಜ್‌, ಗ್ರಾಮ ಪಂಚಾಯಿತಿ ಸದಸ್ಯ ಅಫ್ತಾಬ್‌, ಪತ್ರಕರ್ತ ಎಸ್‌.ಎನ್‌.ಅಶೋಕ್‌ಕುಮಾರ್‌ ಮಾತನಾಡಿದರು. ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತ ಪದ್ಮನಾಭ್‌, ಜೈನ ಸಮಾಜದ ಕಾರ್ಯದರ್ಶಿ ಎಸ್‌.ಪಿ. ಭಾನುಕುಮಾರ್‌, ಪ್ರಾಂಶುಪಾಲ ಗೋಮಟೇಶ್‌ ರಾವಣ್ಣವರ್‌, ಗ್ರಾಮ ಪಂಚಾಯಿತಿ ಸದಸ್ಯರಾದಎಸ್‌.ಬಿ.ಯಶಸ್‌, ಅಫ್ತಾಬ್‌, ಶಾಲಿನಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೀಸೆ ಮಂಜೇಗೌಡ, ಹೋಬಳಿ ಅಧ್ಯಕ್ಷ ಡಿ.ಎಸ್‌.ಮಂಜೇಗೌಡ, ವರ್ತಕರ ಸಂಘದ ಅಧ್ಯಕ್ಷ ಎಸ್‌.ಎಂ.ಸುಧಾಕರ್‌, ಮುಖಂಡರಾದಸಂಜು, ಎಸ್‌.ಪಿ. ಮಹೇಶ್‌, ಲೋಕೇಶ್‌, ಫಣೀಂದ್ರ ಕುಮಾರ್‌, ಶ್ರೀನಿವಾಸ್‌, ಭರತೇಶ್‌, ಭರತ್‌ರಾಜ್‌, ಅನಂತಪದ್ಮನಾಭ್‌, ಎಸ್‌.ಕೆ. ವಿಜಯಕುಮಾರ್‌, ರಾಜಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.