ಹಿರೀಸಾವೆ: ಹೋಬಳಿಯ ಏಳು ಗ್ರಾಮಗಳಾದ ಮಾದಲಗೆರೆ, ನಿಂಬೇಹಳ್ಳಿ, ಮಹದೇಶ್ವರ ಬಡಾವಣೆ, ಎಂ.ಕೆ. ಚಿಕ್ಕೇನಹಳ್ಳಿ, ಎಂ.ಕೆ. ಹೊಸೂರು, ಲಕ್ಷ್ಮಿಪುರ, ರಂಗನಾಥಪುರದವರ ಸಹಯೋಗದಲ್ಲಿ, ಮಾದಲಗೆರೆ–ನಿಂಬೇಹಳ್ಳಿ ಮಧ್ಯದಲ್ಲಿ ಇರುವ ಮಹದೇಶ್ವರಸ್ವಾಮಿಯ 89ನೇ ವರ್ಷದ ಜಾತ್ರಾ ಮಹೋತ್ಸವವನ್ನು ಶಿವರಾತ್ರಿ ನಂತರ (ಫೆ. 27 ರಿಂದ) ಎಂಟು ದಿನ ಆಚರಿಸುತ್ತಾರೆ.
ಈ ವರ್ಷದ ಜಾತ್ರೆಯಲ್ಲಿ ಹಗ್ಗಜಗ್ಗಾಟ, ಶ್ವಾನ ಓಟ, ಹೊನಲು ಬೆಳಕಿನ ವಾಲಿಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಗ್ಗಜಗ್ಗಾಟದ ಪ್ರಥಮ ಬಹುಮಾನ ಟಗರು, ಶ್ವಾನಓಟದ ಸ್ಪರ್ಧೆಯಲ್ಲಿ ಪ್ರಥಮ 3.5 ಅಡಿ ಉದ್ದದ ಬೆಳ್ಳಿಗದೆ, ನಂತರದ ನಾಲ್ಕು ಸ್ಥಾನಕ್ಕೆ ಚಿಕ್ಕ ಗದೆಗಳನ್ನು ಕೊಡಲಾಗುವುದು.
ಇತಿಹಾಸ: 89 ವರ್ಷಗಳ ಹಿಂದೆ ನಿಂಬೇಹಳ್ಳಿಯ ಜಂಗಮ ಗುರುಬಸಪ್ಪ ಮತ್ತು ಮಾದಲಗೆರೆಯ ನಂಜಪ್ಪ ಎಂಬುವವರು, ಪಕ್ಕದ ತೋಟಿ ಗ್ರಾಮದ ಕೆರೆ ಹಿಂಭಾಗ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ, ಏಳು ಪಾಣಿಪಟ್ಟಲಿನ ಶಿವಲಿಂಗವನ್ನು ತಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ಜಾತ್ರೆಯನ್ನು ಆರಂಭಿಸಿದರು ಎಂಬ ಇತಿಹಾಸ ಇದೆ ಎನ್ನುತ್ತಾರೆ ಮಾದಲಗೆರೆ, ನಿಂಬೆಹಳ್ಳಿ ಗ್ರಾಮಸ್ಥರು.
‘ಜಾತ್ರೆಯಲ್ಲಿ ರಥೋತ್ಸವ ನಡೆಯುವುದಿಲ್ಲ. ಭಕ್ತರು ದೇವರ ಮೆರವಣಿಗೆ ಮಾಡುತ್ತಾರೆ. ಎಂಟು ದಿನ ನಡೆಯುವ ಜಾತ್ರೆಯಲ್ಲಿ, ಕೆಲವು ಭಕ್ತರು ಮಹದೇಶ ಮಾದಲಗೆರೆಮಿಯ ಮಾಲೆಯನ್ನು ಧರಿಸಿ 7 ದಿನ ವ್ರತ ಆಚರಿಸುತ್ತಾರೆ’ ಎಂದು ಮಾದಲಗೆರೆ ನಂಜೇಗೌಡ ಹೇಳಿದರು.
ದೇವರ ಮೂಲ ವಿಗ್ರಹದ ಎದುರಿಗೆ ದೇವಾಲಯದ ಎರಡನೇ ಅಂಗಳದಲ್ಲಿ ಬಿಲ್ವಪತ್ರೆ ಮರವಿದ್ದು, ಇದರ ಎಲೆಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸುತ್ತಾರೆ. ಪ್ರತಿದಿನ ಅನ್ನದಾನ, ದೇವರ ಉತ್ಸವ, ಭಜನೆ ನಡೆಯುತ್ತದೆ.
ಫೆ. 27ರಂದು ಮಾದಲಗೆರೆಯಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಮೂಲಸ್ಥಾನಕ್ಕೆ ಕರೆತಂದು, ಗಂಗಾಪೂಜೆ ನಂತರ ಧ್ವಜಾರೋಹಣ ಮಾಡುವ ಮೂಲಕ ಭಕ್ತರು ಜಾತ್ರೆಗೆ ಚಾಲನೆ ನೀಡಲಿದ್ದಾರೆ.
ಮಾರ್ಚ್ 1ರ ಶನಿವಾರ ಸಂಜೆ ಕೋಲಾಟ ಹಾಗೂ ಮಹದೇಶ್ವರ ಕ್ರೀಡಾಭಿಮಾನಿ ಬಾಯ್ಸ್ ವತಿಯಿಂದ ಹಗ್ಗಜಗ್ಗಾಟ ಸ್ಪರ್ಧೆ, ಮಾರ್ಚ್ 2ರಂದು ಬಸವರಾಜು ಗೆಳೆಯರ ಬಳಗದಿಂದ ಶ್ವಾನ ಓಟದ ಸ್ಪರ್ಧೆ, 5ರಂದು ಬೆಳಿಗ್ಗೆ ವೀರಭದ್ರನ ನೃತ್ಯದೊಂದಿಗೆ ಎತ್ತಿನ ಬಂಡಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಸಂಜೆ ಚಿಕ್ಕೇನಹಳ್ಳಿ ಗ್ರಾಮಸ್ಥರಿಂದ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಿದ್ದಾರೆ. ರಾಜ್ಯದ ನಾನಾ ಭಾಗದಲ್ಲಿ ಇರುವ ದೇವರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ಸೇವೆ ಮಾಡುತ್ತಾರೆ.
ಭಕ್ತರ ಸಹಕಾರದಿಂದ ವಿದ್ಯುತ್ ದೀಪಾಲಂಕಾರ ಸೇರಿದಂತೆ ಜಾತ್ರೆ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ. ಭಕ್ತರ ಕಾಣಿಕೆಯನ್ನು ಜಾತ್ರೆಗೆ ಬಳಸಲಾಗುವುದು.ದಿನೇಶ್ ಗ್ರಾ.ಪಂ. ಸದಸ್ಯ ಮಾದಲಗೆರೆ
ಏಳು ದಿನವು ದೇವರಿಗೆ ವಿಶೇಷ ಪೂಜೆ ಮೆರವಣಿಗೆ ನಡೆಯುತ್ತದೆ. ಜಾತ್ರೆ ಸಮಯದಲ್ಲಿ ಭಕ್ತರು ಸ್ವಾಮಿಗೆ ಹರಕೆಗಳನ್ನು ಸಲ್ಲಿಸುತ್ತಾರೆ.ಮಹದೇವಯ್ಯ ಅರ್ಚಕ ಮಾದಲಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.