ADVERTISEMENT

ಶಾಸಕ ಪ್ರೀತಂ ಗೌಡರಿಗೆ ಸಂಸದ ಪ್ರಜ್ವಲ್‌ ರೇವಣ್ಣ ತಿರುಗೇಟು

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 15:53 IST
Last Updated 10 ಜನವರಿ 2023, 15:53 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಹಾಸನ: ‘ನಮ್ಮ ಕುಟುಂಬ ಪ್ರೀತಂ ಗೌಡ ಅವರ ಸವಾಲಿಗೆ ಸಿದ್ಧವಾಗಿದೆ. ನಮಗೆ ಯಾರೇ ಸವಾಲು ಹಾಕಿದರೂ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧವಿದ್ದು, ಹೆದರಿ ಓಡಿ ಹೋಗುವ ಹಾಗೂ ಸವಾಲಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ನಗರದ ಹಾಸನಾಂಬ ದೇವಾಲಯ ಆವರಣದಲ್ಲಿ ಸವಿತಾ ಸಮಾಜದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಚ್.ಡಿ. ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೇ, ನಾನು ಐವತ್ತು ಸಾವಿರ ಲೀಡ್‌ನಲ್ಲಿ ಗೆಲ್ಲುತ್ತೇನೆ ಎಂದು ಹೇಳಿರುವ ಪ್ರೀತಂ ಗೌಡರ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿದ್ದೇವೆ’ ಎಂದರು.

‘ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಅಭ್ಯರ್ಥಿ ಅಂತಿಮಗೊಳಿಸುವ ವಿಚಾರವಾಗಿ, ಇನ್ನು ಹತ್ತು ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸುತ್ತೇವೆ’ ಎಂದ ಅವರು, ‘ಶಾಸಕ ಪ್ರೀತಂ ಗೌಡ ಇನ್ನೂ ಹತ್ತು ಸವಾಲು ಹಾಕಲಿ. ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ’ ಎಂದರು.

ADVERTISEMENT

‘ಈಗಾಗಲೇ ಪ್ರಥಮ ಹಂತದಲ್ಲಿ ಉತ್ತರ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮುಂದಿನ 10 ದಿನಗಳಲ್ಲಿ ಎರಡನೇ ಹಂತದಲ್ಲಿ ಹಾಸನ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಎ.ಟಿ. ರಾಮಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತು ದೊಡ್ಡವರು ಮಾತುಕತೆ ಮಾಡಲಿದ್ದಾರೆ. ಶಾಸಕ ಶಿವಲಿಂಗೇಗೌಡರು ಜ.17 ರವರೆಗೆ ಕಾಲಾವಕಾಶ ಕೇಳಿದ್ದಾರೆ. ಅದಾದ ನಂತರ ಏನೂ ಮಾಡಬೇಕೋ ಅದನ್ನು ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಸವಿತ ಸಮಾಜಕ್ಕೆ ಜೆಡಿಎಸ್ ಪಕ್ಷದಿಂದ ಅಗತ್ಯ ಸಹಕಾರ ನೀಡಿದ್ದು, ಪ್ರತಿ ತಾಲ್ಲೂಕಿನಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಧನ ಸಹಾಯ ಮಾಡಿದ್ದು, ಬಹುತೇಕ ತಾಲ್ಲೂಕಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಎಲ್ಲ ರೀತಿಯ ಸಹಾಯ ಮಾಡುವುದಾಗಿ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.