ADVERTISEMENT

ಕೊಣನೂರು | ರಾಮನಾಥಪುರ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ: ಭಕ್ತರ ಬೇಸರ

ಬಿ.ಪಿ.ಗಂಗೇಶ್‌
Published 18 ಏಪ್ರಿಲ್ 2024, 4:49 IST
Last Updated 18 ಏಪ್ರಿಲ್ 2024, 4:49 IST
   

ಕೊಣನೂರು: ಸ್ನಾನಘಟ್ಟದ ಮಲಿನತೆ ಯಿಂದ ರಾಮನಾಥಪುರ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದ್ದು, ಅಕ್ಷರಶಃ ಕಸದ ತೊಟ್ಟಿಯಂತಾಗಿ ಮಾಲಿನ್ಯದಿಂದ ಸೊರಗುತ್ತಿದೆ ಎನ್ನುವ ಬೇಸರ ಭಕ್ತರಲ್ಲಿ ಹೆಚ್ಚಾಗುತ್ತಿದೆ.

‘ದಕ್ಷಿಣ ಕಾಶಿ’ ರಾಮನಾಥ ಪುರದ ಕಾವೇರಿ ಸ್ನಾನಘಟ್ಟದ ನೀರು, ಬಂಡೆಯ ಮೇಲೆ, ತಿರುಗಾಡುವ ಹಾದಿಯಲ್ಲಿ, ನೀರಿನೊಳಗಿನ ಮಲಿನತೆಯು, ಬರುವ ಭಕ್ತರ ಮತ್ತು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ. ಪುಣ್ಯಕ್ಷೇತ್ರದ ಕಾವೇರಿ ನದಿಯಲ್ಲಿರುವ ಪ್ರಸಿದ್ಧ ಸ್ನಾನಘಟ್ಟದಲ್ಲಿ ಅನಗತ್ಯ ವಸ್ತುಗಳು ಸಂಗ್ರಹವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕ್ಷೇತ್ರದ ಮಹಿಮೆಯನ್ನು ತಿಳಿದು ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಅಸಹ್ಯ ಹುಟ್ಟಿಸುತ್ತಿದೆ. ಸುಬ್ರಹ್ಮಣ್ಯೇಶ್ವರ, ರಾಮೇಶ್ವರ, ಲಕ್ಷಣೇಶ್ವರ, ಪಟ್ಟಾಭಿರಾಮ, ಲಕ್ಷ್ಮಿ ನರಸಿಂಹ, ಆಗಸ್ತೇಶ್ವರ, ವ್ಯಾಸಾಂಜನೇಯ, ರಾಘ ವೇಂದ್ರ ಮಠ ಸೇರಿದಂತೆ ವಿವಿಧ ದೇವಾಲಯಗಳ ಇರುವುದರಿಂದ ದಕ್ಷಿಣ ಭಾರತದ ಕೆಲವು ಪುಣ್ಯ ಕ್ಷೇತ್ರಗಳ ಪೈಕಿ ರಾಮನಾಥಪುರವೂ ಖ್ಯಾತಿ ಗಳಿಸಿದೆ. ನಿತ್ಯ ನೂರಾರು ಭಕ್ತರು ರಾಜ್ಯದ ಬರುತ್ತಾರೆ. ಜೊತೆಗೆ ನೂರಾರು ಸ್ಥಳೀಯರು ವಿವಿಧ ಹಬ್ಬಗಳಲ್ಲಿ ಬಂದು ಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ಸಂಪ್ರದಾಯ.ಭಕ್ತರು ಇಲ್ಲಿನ ಸ್ನಾನಘಟ್ಟದಲ್ಲಿ ಸ್ನಾನ ಮಾಡಿದ ನಂತರ, ತಾವು ಜೊತೆಗೆ ತಂದಿದ್ದ ಬಟ್ಟೆ, ಸಾಬೂನು, ಶಾಂಪೂ ಪಾಕೆಟ್‍ಗಳು, ನೀರಿನ ಬಾಟಲಿಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಇತರೆ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದು ಇಡೀ ವಾತಾವರಣವನ್ನೇ ಹಾಳು ಮಾಡಿದಂತಾಗುತ್ತಿದೆ.

ಯುಗಾದಿ, ದೀಪಾವಳಿ ಮುಂತಾದ ಹಬ್ಬದ ದಿನಗಳಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳ ಜನತೆ ತಮ್ಮೂರಿನ ಗ್ರಾಮದೇವತೆಗಳನ್ನು ಇಲ್ಲಿನ ಸ್ನಾಘಟ್ಟದಲ್ಲಿ ತಂದು, ಗಂಗಾಸ್ನಾನ ಮಾಡಿ, ಪೂಜಿಸಿ ಉತ್ಸವದಲ್ಲಿ ಕೊಂಡೊಯ್ಯುವುದು ಪರಂಪರೆ. ಆ ದಿನಗಳಲ್ಲಿ ದೇವರ ಪೂಜೆಗಾಗಿ ಬಳಸಿ ಉಳಿದ ತ್ಯಾಜ್ಯಗಳು, ಉತ್ಸವಕ್ಕಾಗಿ ಬಳಸಿ ಉಳಿದ ವಸ್ತುಗಳು ರಾಶಿ ಬೀಳುತ್ತಿದ್ದು, ಅಂದಿನ ದಿನ ಉತ್ಸವಕ್ಕಾಗಿ ಬರುವ ಸಾವಿರಾರು ಭಕ್ತರು ಹಾಕುವ ತ್ಯಾಜ್ಯವು ದೊಡ್ಡಮಟ್ಟದ ಮಾಲಿನ್ಯಕ್ಕೆ ಕಾರಣವಾಗಿದೆ.

ADVERTISEMENT

ಒಂದು ತಿಂಗಳ ಕಾಲ ಜರುಗುವ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಜಾತ್ರಾ ಸಮಯದಲ್ಲಿ ಬರುವ ಸಾವಿರಾರು ಭಕ್ತರು ತಮ್ಮ ಹಳೆಯ ಬಟ್ಟೆಗಳು, ಬೆಡ್ ಶೀಟ್‌ಗಳು, ಹರಿದ ಬಟ್ಟೆಗಳನ್ನು ನೀರಿಗೆ ಹಾಕುತ್ತಿದ್ದಾರೆ.

ಸ್ನಾನಘಟ್ಟದ ಎಲ್ಲೆಂದರಲ್ಲಿ ಬಿದ್ದಿರುವ ಅನುಪಯುಕ್ತ ವಸ್ತುಗಳು, ಗಾಳಿಯಿಂದ ನೀರಿಗೆ ಹಾರಿ ನೀರಿನೊಂದಿಗೆ ಹರಿಯುತ್ತಾ ನೀರಿನ್ನು ಕುಡಿಯಲು, ಸ್ನಾನ ಮಾಡಲು ಅಸಹ್ಯ ಪಡುವಂತೆ ಮಾಡುತ್ತಿವೆ. ಸ್ನಾನಘಟ್ಟಕ್ಕೆ ಇಳಿಯುವ ಮೆಟ್ಟಿಲಿನ ಬಳಿಯಿಂದ ಗೋಗರ್ಭ ಶಿಲೆಯವರೆಗೆ ನಡೆದುಕೊಂಡು ಹೋಗುವ ಇಕ್ಕೆಲಗಳ ನೀರಿನಲ್ಲಿ ರಾಶಿಗಟ್ಟಲೆ ಬಟ್ಟೆ ತೇಲುತ್ತಿದ್ದು, ಪುಣ್ಯಸ್ನಾನ ಮಾಡುವವರ ದೇಹದ ಮೇಲೂ ಪರಿಣಾಮ ಬೀರುತ್ತಿದೆ. ಮೆಟ್ಟಿಲಿನ ಬಳಿ ಹಾಕುವ ಕಸವು ನೇರವಾಗಿ ನದಿಯ ನೀರನ್ನು ಸೇರುತ್ತಿದೆ. ವಿಶಾಲವಾದ ಬಂಡೆ ಗಳಂತೂ ಮಲ–ಮೂತ್ರ ವಿಸರ್ಜನೆಯ ತಾಣವಾಗಿದ್ದು, ದುರ್ವಾಸನೆ ಬೀರುತ್ತಿದೆ. ಯಾಕಾದರೂ ಇಲ್ಲಿ ಬಂದೆವೋ? ಇಲ್ಲಿ ನೀರನ್ನು ಪವಿತ್ರವೆಂದು ನಂಬಿರುವ ನಾವು ಸ್ನಾನ ಮಾಡುವುದು ಹೇಗೆ ಎಂದು ಅಂದುಕೊಳ್ಳುತ್ತಲೇ ಭಕ್ತರು ಮತ್ತು ಪ್ರವಾಸಿಗರು ಕಣ್ಮುಚ್ಚಿ ಸ್ನಾನ ಮಾಡಿ ತೆರಳುತ್ತಿದ್ದಾರೆ.

ಸ್ನಾನಘಟ್ಟಕ್ಕೆ ಇಳಿಯುವ ಮೆಟ್ಟಿಲಿನ ಬಳಿ ರಾಶಿ ರಾಶಿ ಒಡೆದಿರುವ ದೇವರ ಪೋಟೊಗಳನ್ನು ತಂದಿಟ್ಟಿದ್ದು, ಗಾಳಿ ಮಳೆ ಬಂದಾಗ ಪೋಟೊಗಳು ಸೇರಿದಂತೆ ಒಡೆದು ಗಾಜುಗಳು ನೀರು ಸೇರುತ್ತವೆ. ವಿವಿಧೆಡೆಗಳಿಂದ ಶಿಥಿಲಗೊಂಡಿರುವ ಮತ್ತು ವಿರೂಪಗೊಂಡಿರುವ ಅನೇಕ ಕಲ್ಲಿನ ವಿಗ್ರಹಳನ್ನು ಇಲ್ಲಿ ತಂದಿಟ್ಟಿದ್ದು ಅನೇಕ ವರ್ಷಗಳಿಂದ ಇವುಗಳು ಇಲ್ಲಿಯೇ ಇದ್ದು ದಿನದಿಂದ ದಿನಕ್ಕೆ ಇವುಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.