ADVERTISEMENT

ಮೂವರು ಡಿಸಿಎಂ | ಯಾರೋ ಹೇಳಿಕೊಟ್ಟು ಮಾತನಾಡಿಸುತ್ತಿಲ್ಲ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 15:48 IST
Last Updated 6 ಜನವರಿ 2024, 15:48 IST

ಹಾಸನ: ‘ಮೂವರು ಡಿಸಿಎಂ ಮಾಡುವಂತೆ ನಾನು ಹೇಳಿರುವುದು ಯಾರ ಪರ, ವಿರುದ್ಧ ಅಲ್ಲ ಅಥವಾ ಯಾರೋ ಹೇಳಿಕೊಟ್ಟು ಮಾತಾಡಿಸುತ್ತಿದ್ದಾರೆಂದೂ ಅಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಶನಿವಾರ ಹೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೂವರು ಡಿಸಿಎಂ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯವಾಗಲಿದೆ ಎಂಬ ದೃಷ್ಟಿಯಿಂದ ಹೇಳಿದ್ದೇನೆ. ಮಾಡುವುದು, ಬಿಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು, ನಾನು ಹೇಳಿದಾಕ್ಷಣ ಆಗಿ ಬಿಡುತ್ತಾ’ ಎಂದು ಪ್ರಶ್ನಿಸಿದರು.

‘ಛತ್ತೀಸಗಢ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಅಲ್ಲಿ ಮೂವರು ಡಿಸಿಎಂ ಮಾಡಿದ್ದಾರೆ. ನಮ್ಮಲ್ಲೂ ಮಾಡಿ ಎಂದು ಸಲಹೆ ನೀಡಿದ್ದೇನಷ್ಟೆ’ ಎಂದರು.

ADVERTISEMENT

‘ವಿಕ್ರಂ ಸಿಂಹ ಪ್ರಕರಣದಲ್ಲಿ ಮುಖ್ಯಮಂತ್ರಿಯೇ ಷಡ್ಯಂತ್ರ ರೂಪಿಸಿದ್ದಾರೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ  ಪ್ರತಿಕ್ರಿಯಿಸಿದ ಅವರು, ‘ಬಹಳ ಬಾಲಿಶವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಯಾರ ಪರ ಅಥವಾ ಯಾರ ವಿರುದ್ಧ ಮಾತನಾಡುತ್ತಾರೆ ಎಂಬುದು ಅವರಿಗೆ ಸೇರಿದ್ದು. ಏಕೆಂದರೆ ಇದೇ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಯಾವ್ಯಾವ ಸಂದರ್ಭದಲ್ಲಿ ಯಾರ‍್ಯಾರ ವಿರುದ್ಧ ಹೇಗೆ ಟೀಕೆ ಮಾಡಿದ್ದಾರೆ ಎಂಬುದು ಯೂಟ್ಯೂಬ್‍ನಲ್ಲಿ ಸಿಗುತ್ತದೆ ನೋಡಿಕೊಳ್ಳಿ’ ಎಂದು ಹೇಳಿದರು.

‘ಕನ್ನಡದ ಹೆಸರಿನಲ್ಲಿ ಕನ್ನಡಿಗರ ಆಸ್ತಿ ನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಹೋರಾಟಗಾರರಿಗೆ ಕೆಲವು ರಹಸ್ಯ ಕಾರ್ಯಸೂಚಿ ಇರುತ್ತದೆ. ಅದು ಈಡೇರದಿದ್ದಾಗ ಹೀಗೆ ಹೋರಾಟ ಆಗುತ್ತದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.