ADVERTISEMENT

ರಾತ್ರಿ ವೇಳೆ ಗಸ್ತು ಬಿಗಿಗೊಳಿಸಿ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:07 IST
Last Updated 31 ಜುಲೈ 2025, 4:07 IST
ಚನ್ನರಾಯಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಡಿವೈಎಸ್‍ಪಿ ಕುಮಾರ್, ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಡಿವೈಎಸ್‍ಪಿ ಕುಮಾರ್, ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ‘ಪಟ್ಟಣದ ವ್ಯಾಪ್ತಿಯಲ್ಲಿ ರಾತ್ರಿವೇಳೆ ಗಸ್ತು ಹೆಚ್ಚಿಸಬೇಕು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸಂಚಾರಿ ವ್ಯವಸ್ಥೆ ಸುಧಾರಿಸಬೇಕು. ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕಾದರೆ ರಾತ್ರಿಗಸ್ತು ಬಿಗಿಗೊಳಿಸಬೇಕು. ಪಟ್ಟಣದಲ್ಲಿ ಸುಗಮ ಸಂಚಾರದ ದೃಷ್ಠಿಯಿಂದ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ವ್ಯವಸ್ಥಿತವಾಗಿ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದರು.

‘ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 36 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಅದರಲ್ಲಿ 20 ಕ್ಯಾಮೆರಾಗಳು ಉತ್ತಮ ಸ್ಥಿತಿಯಲ್ಲಿವೆ. ಉಳಿದ 16 ಕ್ಯಾಮೆರಾಗಳು ಸುಸ್ಥಿತಿಯಲ್ಲಿಲ್ಲ. ಪುರಸಭೆ ವತಿಯಿಂದ ಹೊಸದಾಗಿ 16 ಕ್ಯಾಮೆರಾಗಳನ್ನು ಇಲಾಖೆಗೆ ನೀಡಲಾಗುವುದು’ ಎಂದರು.

ADVERTISEMENT

‘ಸಿಗ್ನಲ್‍ನಲ್ಲಿ ಬೈಕ್ ಸವಾರರು ನಿಯಮ ಉಲ್ಲಂಘಿಸದಂತೆ ಸಂಚಾರಿ ಪೊಲೀಸರು ನಿಗಾವಹಿಸಬೇಕು. ಸಣ್ಣಪುಟ್ಟ ಲೋಪವನ್ನು ನಿವಾರಿಸಿಕೊಂಡು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಇನ್ನು 15 ದಿನದಲ್ಲಿ ಪೊಲೀಸ್ ಇಲಾಖೆಗೆ 2 ಬೈಕ್‍ಗಳನ್ನು ನೀಡಲಾಗುವುದು. ಮುಂದಿನ ವರ್ಷ ಏಪ್ರಿಲ್ ನಂತರ ಎರಡು ಬೊಲೆರೋ ಜೀಪುಗಳನ್ನು ನೀಡಲಾಗುವುದು’ ಎಂದರು.

‘ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಪೋಕ್ಸೊ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಹಿರೀಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ ಹೋಬಳಿ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆಯಾ ಗ್ರಾಮ ಪಂಚಾಯಿತಿಗಳ ನೆರವು ಪಡೆಯಲಾಗುವುದು. ಪಟ್ಟಣದ ಕೆಲ ಮೆಡಿಕಲ್ ಶಾಪ್‍ಗಳಲ್ಲಿ ಮಾದಕ ದ್ರವ್ಯದ ಮಾತ್ರೆ ಮಾರಾಟ ಮಾಡಲಾಗುತ್ತಿದೆ ಎಂಬ ವಿಷಯ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.

ಡಿವೈಎಸ್‌ಪಿ ಕುಮಾರ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.