ADVERTISEMENT

ಪ್ರತಿಭಟನೆ: ಮೊದಲ ದಿನವೇ ಬೆಂಗಳೂರು – ಮಂಗಳೂರು ಟೋಲ್ ಸಂಗ್ರಹ ಸ್ಥಗಿತ

30 ಕಿ.ಮೀ. ಅಂತರದಲ್ಲಿ ಟೋಲ್‌ ಸಂಗ್ರಹ ಕೇಂದ್ರ: ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 12:56 IST
Last Updated 16 ಡಿಸೆಂಬರ್ 2024, 12:56 IST
ಆಲೂರು ತಾಲ್ಲೂಕಿನ ಚೌಲಗೆರೆ ಬಳಿ ಟೋಲ್‌ ಕೇಂದ್ರ ಆರಂಭಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಹಾಗೂ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.
ಆಲೂರು ತಾಲ್ಲೂಕಿನ ಚೌಲಗೆರೆ ಬಳಿ ಟೋಲ್‌ ಕೇಂದ್ರ ಆರಂಭಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಹಾಗೂ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.   

ಹಾಸನ: ಆಲೂರು ತಾಲ್ಲೂಕಿನ ಚೌಲಗೆರೆ ಬಳಿಯ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರದಿಂದ ಆರಂಭವಾದ ಟೋಲ್‌ ಸಂಗ್ರಹವನ್ನು ಜನರ ಪ್ರತಿಭಟನೆ ಕಾರಣ ಸ್ಥಗಿತಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಏಕಾಏಕಿ ಟೋಲ್‌ ಸಂಗ್ರಹ ಆರಂಭಿಸಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ‘ರಸ್ತೆ ಕಾಮಗಾರಿ ಕಳಪೆಯಾಗಿದೆ. ಸಕಲೇಶಪುರದಿಂದ ಮಾರನಹಳ್ಳಿವರೆಗೂ ರಸ್ತೆ ಪೂರ್ಣಗೊಂಡಿಲ್ಲ. ಆದರೂ ಟೋಲ್ ಸಂಗ್ರಹಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾರಿಗೆ ಒಮ್ಮೆಗೆ ₹50, ಎರಡು ಬಾರಿಗೆ ₹75, ಮಿನಿ ಲಾರಿ, ಮಿನಿ ಬಸ್‌ಗೆ ಒಂದು ಸಲಕ್ಕೆ ₹80, ಎರಡು ಬಾರಿಗೆ ₹120, ಬಸ್‌ಗಳಿಗೆ ಒಮ್ಮೆಗೆ ₹165, ಎರಡು ಬಾರಿಗೆ ₹245, ಟ್ರಕ್, ಟ್ಯಾಂಕರ್‌ಗಳಿಗೆ ಒಮ್ಮೆಗೆ ₹180, ಎರಡು ಬಾರಿಗೆ ₹270, ಕಂಟೇನರ್‌ಗಳಿಗೆ ಒಮ್ಮೆಗೆ ₹260 ಹಾಗೂ ಎರಡು ಬಾರಿಗೆ ₹385 ನಿಗದಿ ಮಾಡಲಾಗಿದ್ದು, ವಾಹನಗಳ ಮಾಲೀಕರಿಗೆ ಹೊರೆಯಾಗಲಿದೆ’ ಎಂದು ಹೇಳಿದರು.

ADVERTISEMENT

‘ನಿಯಮದ ಪ್ರಕಾರ ಪ್ರತಿ 60 ಕಿ.ಮೀ. ಅಂತರದಲ್ಲಿ ಟೋಲ್‌ ಕೇಂದ್ರವಿರಬೇಕು. ಆದರೆ, ಈಗಾಗಲೇ ಶಾಂತಿಗ್ರಾಮದಲ್ಲಿ ಟೋಲ್‌ ಇದ್ದು, ಅಲ್ಲಿಂದ ಆಲೂರು ತಾಲ್ಲೂಕಿನ ಚೌಲಗೆರೆ ಬಳಿಯ ಟೋಲ್‌ಗೆ ಕೇವಲ 30 ಕಿ.ಮೀ. ದೂರವಿದೆ. ನಿಯಮ ಮೀರಿ ಟೋಲ್ ಸಂಗ್ರಹಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.