ಆಲೂರು: ಹಲವು ವರ್ಷಗಳಿಂದ ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದ ಶೆಡ್‍ನಲ್ಲಿ ಸಕ್ಕಿಂಗ್ ಮೆಷಿನ್ ಮತ್ತು ಟ್ರ್ಯಾಕ್ಟರ್ ಅನಾಥವಾಗಿ ನಿಂತಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯಿಂದ ಆಲೂರು ತಾಲ್ಲೂಕು ಪಂಚಾಯಿತಿಗೆ ಸಕ್ಕಿಂಗ್ ಮೆಷಿನ್ ಮತ್ತು ಟ್ರ್ಯಾಕ್ಟರ್ ಅನ್ನು ನೀಡಲಾಗಿದೆ. ಈ ಯಂತ್ರಗಳನ್ನು ಶ್ರವಣಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಬಳಕೆ ಮಾಡಿದ್ದು, ನಂತರ ತಾಲ್ಲೂಕು ಪಂಚಾಯಿತಿಗಳಲ್ಲಿ ಬಳಕೆಯಾಗಲಿ ಎಂದು ಇಲ್ಲಿಗೆ ಕಳುಹಿಸಲಾಗಿದೆ.
ಪ್ರಾರಂಭದಲ್ಲಿ ಈ ಯಂತ್ರಗಳನ್ನು ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಬಳಕೆ ಮಾಡಲಾಯಿತು. ನಂತರದಲ್ಲಿ ಇವುಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಹಲವು ಬಾರಿ ದುರಸ್ತಿ ಮಾಡಿ ಬಳಕೆ ಮಾಡಲಾಯಿತು. ಆದರೆ ಪದೇ ಪದೇ ದುರಸ್ತಿಗೆ ಬರಲಾರಂಭಿಸಿದ ಕಾರಣ ಖರ್ಚು ಅತಿಯಾಗಿ ಯಂತ್ರಗಳನ್ನು ಬಳಕೆ ಮಾಡದೇ ನಿಲ್ಲಿಸಲಾಗಿದೆ. ಸದ್ಯ ಯಂತ್ರಗಳು ನಿಂತಲ್ಲಿಯೆ ನಿಂತು ತುಕ್ಕು ಹಿಡಿಯುತ್ತಿದ್ದು, ಸರ್ಕಾರಕ್ಕೆ ನಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿನ ಜನರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಶೌಚ ಗುಂಡಿಗಳಿವೆ. ಗುಂಡಿಗಳು ತುಂಬಿದಾಗ ಸಕ್ಕಿಂಗ್ ಮೆಷಿನ್ ಬಳಸಬೇಕು. ಖಾಸಗಿ ಮೆಷಿನ್‍ಗಳನ್ನು ಬಳಸಿದರೆ ಅತಿಯಾದ ಬಾಡಿಗೆ ತೆರಬೇಕಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮೆಷಿನ್‍ಗಳನ್ನು ದುರಸ್ತಿ ಮಾಡಿಸಿ, ಬಳಕೆಗೆ ಅನುಕೂಲ ಮಾಡಬೇಕು. ಅಥವಾ ಯಂತ್ರಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಜಾಗ್ರತೆ ವಹಿಸಿದ್ದರೆ, ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಯಂತ್ರಗಳ ಶಾಶ್ವತ ಉಪಯೋಗ ಅಥವಾ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಜನರ ಒತ್ತಾಯ.
ಜಿಲ್ಲಾ ಪಂಚಾಯಿತಿಯಿಂದ ದಾಖಲೆ ಪಡೆದು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ..ಹೇಮಂತಕುಮಾರ್, ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.